ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಶಾಖೆ
ಬೆಂಗಳೂರು: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಶಾಖೆ ಪ್ರಾರಂಭಿಸುವ ಬಗ್ಗೆ ಇನ್ಫೋಸಿಸ್ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ಇನ್ಫೋಸಿಸ್ ಸಂಸ್ಥೆ, ಎಲೆಕ್ಟ್ರಾನಿಕ್ ಸಿಟಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ನಾರಾಯಣಮೂರ್ತಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಬೆಂಗಳೂರು ಹೊರತುಪಡಿಸಿ ರಾಜ್ಯದ 2ನೇ ಹಂತದ ನಗರಗಳಲ್ಲಿ ಸಾಫ್ಟ್ವೇರ್ ಕಂಪನಿಗಳನ್ನು ಪ್ರಾರಂಭಿಸುವಂತೆ ನಾರಾಯಣಮೂರ್ತಿ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಇತರ ಸಾಫ್ಟ್ವೇರ್ ದಿಗ್ಗಜರಿಗೆ ಸಚಿವ ಪಾಟೀಲ್ ಮನವಿ ಮಾಡಿದ್ದಾರೆ. ಈ ಸಂಬಂಧ ಎಲ್ಲ ಸೌಕರ್ಯ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಜಾಗತಿಕ, ದೇಶ ಮಟ್ಟದಲ್ಲಿ ರಾಜ್ಯದ ಹೆಮ್ಮೆಯಾಗಿರುವ ಸಾಫ್ಟ್ವೇರ್ ಉದ್ಯಮವು ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಅನಿವಾರ್ಯ ಎಂದು ಸಚಿವರು ಉದ್ಯಮಿಗಳಿಗೆ ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಾರಾಯಣಮೂರ್ತಿ, ಕಡಿಮೆ ಭೂಮಿ ಬಳಕೆಯಿಂದ ಹೆಚ್ಚಿನ ಉದ್ಯೋಗವನ್ನು ಸಾಫ್ಟ್ವೇರ್ ಉದ್ಯಮದಿಂದ ಸೃಷ್ಟಿಸಬಹುದು. ರಾಜ್ಯದ ಜಿಡಿಪಿಯ ಅರ್ಧಭಾಗವನ್ನು ಬೆಂಗಳೂರು ಭರಿಸುತ್ತಿದೆ. ದೇಶದ ಐಟಿ ರಫ್ತಿನಲ್ಲಿ ರಾಜ್ಯ ಶೇ. 36 ಪ್ರಮಾಣವನ್ನು ಹೊಂದಿದೆ. ರಾಜ್ಯ ಸರ್ಕಾರ ಈ ಪ್ರಾಮುಖ್ಯತೆ ಅರಿತು ಕಾರ್ಯ ನಿರ್ವಹಿಸಬೇಕಿದೆ ಎಂದಿದ್ದಾರೆ. ಸಚಿವರು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದರು.