ಧಾರವಾಡ ಜಿಲ್ಲಾಸ್ಪತ್ರೆ ನೂತನ ಕಟ್ಟಡ ನೀಲನಕ್ಷೆ ಪರಿಶೀಲನೆ
ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬುಧವಾರ ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ನೀಲನಕ್ಷೆ ವೀಕ್ಷಿಸಿದರು. ಬಳಿಕ ಕಟ್ಟಡದ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿದರು.
ಮೊದಲಿಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಉದ್ದೇಶಿತ ಹೆರಿಗೆ ಹಾಗೂ ಮಕ್ಕಳ ಆರೋಗ್ಯ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಆಸ್ಪತ್ರೆಯ ಹಳೆಯ ಕಟ್ಟಡ ತೆಗೆದುಹಾಕಿ ಹೊಸ ಕಟ್ಟಡ ನಿರ್ಮಿಸುವ ನೀಲನಕ್ಷೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬುಧವಾರ ಪರಿಶೀಲಿಸಿದರು.
ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರಿಗೆ, ಜಿಲ್ಲಾಸ್ಪತ್ರೆ ಒಟ್ಟಾರೆ 10 ಎಕರೆ ಪ್ರದೇಶ ಹೊಂದಿದೆ. ಅದರಲ್ಲಿ 28 ವಿವಿಧ ವಿಭಾಗಗಳ ಕಟ್ಟಡಗಳಿದ್ದು, ಅವುಗಳ ಒಳಾಂಗಣ ವಿಸ್ತೀರ್ಣ ಒಟ್ಟುಗೂಡಿ 6,356 ಚ.ಮೀ. ಇದೆ ಎಂದು ಸಂಯೋಜಿತ ಕಟ್ಟಡ ನೀಲನಕ್ಷೆಯ ಸಿಬ್ಬಂದಿ ವಿವರಿಸಿದರು. ಒಟ್ಟಾರೆ ಕಟ್ಟಡಗಳ ವಿಸ್ತೀರ್ಣ ಲೆಕ್ಕ ಹಾಕಿದರೆ ಬರೀ ಒಂದೂವರೆ ಎಕರೆ ಪ್ರದೇಶ ಮಾತ್ರ ಕಟ್ಟಡವಿರಬೇಕು. ಆದರೆ ಉದ್ದೇಶಿತ ಹೊಸ ಕಟ್ಟಡಕ್ಕೆ ಜಾಗೆ ಇಲ್ಲವೆಂದು ಹಳೆಯ ಕಟ್ಟಡಗಳನ್ನು ತೆಗೆಯುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಹೇಗೆ ಸಾಧ್ಯ? ಅಲ್ಲದೆ ನೆಲಸಮಗೊಳಿಸುವ ಕಟ್ಟಡದ ರೋಗಿಗಳಿಗೆ ಎಲ್ಲಿ ಆಶ್ರಯ ಕಲ್ಪಿಸುತ್ತೀರಿ ಎಂದು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ ಸಚಿವರಿಗೆ ಸಮಾಧಾನ ತರಲಿಲ್ಲ.
ಪರಿಶೀಲನೆ: ತಾವು ಇನ್ನೊಮ್ಮೆ ಈ ಕುರಿತು ಚರ್ಚೆಗೆ ಕರೆಸುವ ಮುನ್ನ ಇನ್ನೆರಡು ದಿನದಲ್ಲಿ ತಜ್ಞ ಆರ್ಕಿಟೆಕ್ಚರ್ನ್ನು ಸಂಪರ್ಕಿಸಿ ಅಥವಾ ಅವರನ್ನು ಕರೆದು ಜಿಲ್ಲಾಸ್ಪತ್ರೆಯ ಆವರಣ ಕಣ್ಣಾರೆ ತೋರಿಸಿ ಇನ್ನೊಮ್ಮೆ ಸೂಕ್ತ ರೀತಿಯ ನೀಲನಕ್ಷೆ ರೂಪಿಸುವಂತೆ ಲಾಡ್ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಸ್.ಬಿ. ಕಡಕೋಳ ಅವರಿಗೆ ನಿರ್ದೇಶನ ನೀಡಿದರು. ಅನಂತರ ವಿವಿಧ ವಿಭಾಗಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಯಿಂದ ತೆರಳಿದ ಅವರು ತಡಸಿನಕೊಪ್ಪದಲ್ಲಿರುವ ಸುಮಾರು 60 ಎಕರೆ ಸರ್ಕಾರಿ ಜಮೀನನ್ನು ಪರಿಶೀಲಿಸಿ, ಅದರ ಉಪಯೋಗ ಕುರಿತು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಹಾಗೂ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಅವರ ಜತೆ ಚರ್ಚಿಸಿದರು. ತದನಂತರ ಸಂಜೀವಿನಿ ಪಾರ್ಕ್ಗೆ ಭೇಟಿ ನೀಡಿದರು. ಸಂಜೀವಿನಿ ಪಾರ್ಕ್ ಅಭಿವೃದ್ಧಿಗೆ ರು. 25 ಲಕ್ಷಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಎಫ್ಓ ಹಲಗತ್ತಿ ಸಚಿವರಿಗೆ ವಿವರಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಇದ್ದರು.