ಫಲಾನುಭವಿಗಳಿಗೆ ಜಮಾ ಆಗಿಲ್ಲ ಹಣ
ಧಾರವಾಡ: ತಾಲೂಕಿನ 37 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬಸವ ವಸತಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಿಗದಿತ ಅವಧಿಯೊಳಗೆ ಹಣ ಜಮೆಯಾಗಿಲ್ಲ. ಆದ್ದರಿಂದ, ಸರ್ಕಾರ ಈ ಕೂಡಲೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ತಡಕೋಡ ಗ್ರಾಮಸ್ಥರು ಇಲ್ಲಿನ ಕಡಪಾ ಮೈದಾನದಿಂದ ಜಿಪಂ ವರೆಗೆ ಗುರುವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ತಾಲೂಕಿನಲ್ಲಿ ಬಸವ ವಸತಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಹಾಗಾಗಿ, ಪ್ರಸ್ತುತ ಈ ಯೋಜನೆಯ ಫಲಾನುಭವಿಗಳು ಸಾಲ ಮಾಡಿ ಮನೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. 2010-11ರ ಸಾಲಿನಲ್ಲಿ ಬಿಡುಗಡೆಯಾದ ಬಸವ ವಸತಿ ಮನೆಗಳ ಹಣ ಇನ್ನೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ. ಯೋಜನೆಯ ಫಲಾನುಭವಿಗಳು, ಸರ್ಕಾರ ಮಂಜೂರು ಮಾಡಿದ್ದ ಮನೆಗಳ ಆದೇಶ ಪತ್ರವನ್ನು ಹಿಡಿದುಕೊಂಡು ಸರ್ಕಾರ ಹಣ ಬಿಡುಗಡೆ ಮಾಡಬಹುದೆಂಬ ಭರವಸೆಯಲ್ಲಿ ಸಾಲ-ಸೊಲ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಣಕ್ಕಾಗಿ ಪರದಾಟ: ಈ ಆಶ್ರಯ ವಸತಿ ಯೋಜನೆ ಆನ್‌ಲೈನ್ ಸಂಪರ್ಕ ಹೊಂದಿದ್ದು, ಬೆಂಗಳೂರಿನ ರಾಜೀವಗಾಂಧಿ ವಸತಿ ನಿಗಮದವರು, ಈ ಮನೆಗಳು ಬ್ಲಾಕ್ ಆಗಿವೆ ಎಂದು ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸುತ್ತಿದ್ದಾರೆ. ಆದರೆ, ಪ್ರಸ್ತುತ ಅರ್ಹ ಫಲಾನುಭವಿಗಳು ಸಾಲ ಮಾಡಿ ಮನೆಗಳನ್ನು ಹಾಕಿಸಿಕೊಂಡಿದ್ದು, ಮಂಜೂರಾದ ಹಣಕ್ಕಾಗಿ ಪರದಾಡುವಂತಾಗಿದೆ. ಆದ್ದರಿಂದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಸಮಸ್ಯೆಯನ್ನು ಪರಿಶೀಲಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕು.
ನಿಗದಿತ ಅವಧಿಯೊಳಗೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡದೇ ಹೋದರೆ ಫಲಾನುಭವಿಗಳ ಸಮೇತ ಇಲಾಖೆ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಭೀಮಪ್ಪ ಕಾಸಾಯಿ, ನಾಮದೇವ ಪಟದಾರಿ, ಶಂಕರ ದೊಡಮನಿ, ಶಿವನಗೌಡ ಜನಗೌಡರ, ಶೈಲಾ ಅಬ್ಬಾರ, ಲಕ್ಷ್ಮವ್ವ ಕುಂಬಾರ, ಲೀಲಾವತಿ ಕೊಟಬಾಗಿ ಇದ್ದರು.