ಹುಬ್ಬಳ್ಳಿಗರಿಗೆ ಇನ್ನೂ ಬಾರದ ಅನ್ನಭಾಗ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 11
ಬಡವರಿಗೆ ಅನ್ನಭಾಗ್ಯ ಎಂದು ಹೇಳಿಕೊಂಡು ಅದ್ಧೂರಿಯಾಗಿ ರು. 1 ಕೆಜಿ ಅಕ್ಕಿ ಯೋಜನೆಗೆ ಚಾಲನೆ ನೀಡಿದ ಕಾಂಗ್ರೆಸ್ ಸರ್ಕಾರ ಬೇರು ಮಟ್ಟದಲ್ಲಿ ಅದಕ್ಕೊಂದು ಪೂರ್ವ ತಯಾರಿ ಮಾಡಿಲ್ಲ.
ಬುಧವಾರ ರಾಜ್ಯಾದ್ಯಂತ ಏಕಕಾಲಕ್ಕೆ ಜಾರಿಗೆ ಬಂದ ಯೋಜನೆಗೆ ಹುಬ್ಬಳ್ಳಿಯಲ್ಲಿ ಮೂರ್ತ ಸ್ವರೂಪ ಸಿಗಬೇಕಾದರೆ ಕನಿಷ್ಠ ಇನ್ನೂ ಒಂದು ವಾರವಾದರೂ ಬೇಕೇನೋ? ಏಕೆಂದರೆ ಹುಬ್ಬಳ್ಳಿ ನಗರ ವ್ಯಾಪ್ತಿಯ ಬಹುತೇಕ ನ್ಯಾಯಬೆಲೆ ಅಂಗಡಿಗಳಿಗೆ ಇನ್ನೂ ರು. 1 ಕೆಜಿ ಅಕ್ಕಿ ಬಂದೇ ಇಲ್ಲ.
ಹಳೇ ಹುಬ್ಬಳ್ಳಿ ವ್ಯಾಪ್ತಿಯ ಕೊಳಚೆ ಪ್ರದೇಶ ಮತ್ತು ಪರಿಶಿಷ್ಟ ವರ್ಗದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದ ನ್ಯಾಯಬೆಲೆ ಅಂಗಡಿಗಳಿಗೆ ರು. 1 ಕೆಜಿ ಅಕ್ಕಿ ಅಷ್ಟೇ ಅಲ್ಲ ಇನ್ನುಳಿದ ಪಡಿತರ ಧಾನ್ಯಗಳು ಬಂದೇ ಇಲ್ಲ. ಬಿಪಿಎಲ್ ಕುಟುಂಬಳಿಗೆ ಕನಿಷ್ಠ 30 ಕೆಜಿ ಅಕ್ಕಿ ವಿತರಿಸುವುದಕ್ಕೆ ಸರ್ಕಾರ ಬೇರು ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡಿಲ್ಲ ಎನ್ನುವುದು ಈ ಮೂಲಕ ಸ್ಪಷ್ಟವಾಗಿದೆ.
ಸಿಗದ ಪಡಿತರದಾರರ ಪಟ್ಟಿ: ಹುಬ್ಬಳ್ಳಿ ನಗರದ ಹಲವಾರು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸರ್ಕಾರ ವಿತರಿಸುವ ಪಡಿತರವನ್ನು ಇನ್ನೂ ಗೋದಾಮುಗಳಿಂದ ಎತ್ತುವಳಿ ಮಾಡಿಲ್ಲ. ಈ ಕುರಿತು ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಕೇಳಿದರೆ ಆಹಾರ ಮತ್ತು ಪಡಿತರ ಇಲಾಖೆಯಿಂದ ಇನ್ನೂ ನಮಗೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರದಾರರ ಪಟ್ಟಿ ಸಿಕ್ಕಿಲ್ಲ. ಆಹಾರ ಮತ್ತು ಪಡಿತರ ಇಲಾಖೆ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದೆ. ಆದರೆ ಈ ನಿಟ್ಟಿನಲ್ಲಿ ಇನ್ನೂ ಯಾವುದೇ ಕ್ರಮ ಆಗಿಲ್ಲ ಎನ್ನುತ್ತಾರೆ ಅವರು.
ಇನ್ನು ಹುಬ್ಬಳ್ಳಿ ನಗರ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಎಸ್ಡಬ್ಲ್ಯೂಪಿಓ ತೂಕದ ಯಂತ್ರಗಳಲ್ಲಿ ತಂತ್ರಾಂಶ ತೊಂದರೆ ಕೂಡ ಕಾಣಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಈ ತೂಕದ ಯಂತ್ರಗಳ ಅಳವಡಿಕೆ ಕೆಲಸ ನಡೆಯುತ್ತಿದ್ದು, ಕೆಲವು ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಇಲ್ಲೂ ಕೂಡ ತಂತ್ರಾಂಶ ಅಳವಡಿಕೆ ಅಷ್ಟು ಸುಲಭವಾಗಿಲ್ಲ.
ಇನ್ನು ಬಿಪಿಎಲ್ ಕುಟುಂಬಗಳಿಗೆ 30 ಕೆಜಿ ಅಕ್ಕಿ ವಿತರಣೆ ಮತ್ತು ಸಂಗ್ರಹ ಕೂಡ ಸಮಸ್ಯೆಯಾಗಿದ್ದು, ಬಾಣತಿ ಕಟ್ಟಾ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಯೊಂದರಲ್ಲಿ 1,280 ಅಂತ್ಯೋದಯ ಪಡಿತರ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿದ್ದು, ಈ ನ್ಯಾಯಬೆಲೆ ಅಂಗಡಿಗೆ ಸೋಮವಾರ ಅಥವಾ ಮಂಗಳವಾರ ರು. 1 ಕೆಜಿ ಅಕ್ಕಿ ಬರುವ ಸಾಧ್ಯತೆ ಇದೆ. ಗೋದಿ ಮತ್ತು ಸಕ್ಕರೆ ಕೂಡ ಬಂದಿಲ್ಲ. ಹೀಗಾಗಿ ಪಡಿತರ ವಿತರಣೆಗೆ ಇಂಡೆಂಟ್ ಹಾಕಿಲ್ಲ ಎಂದು ಅಂಗಡಿ ಮಾಲೀಕ ಎಂ.ಪಿ. ಜಾಧವ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಗೋದಾಮಿನಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರತಿದಿನ ಕೇವಲ 15 ಅಂಗಡಿಯವರಿಗೆ ಮಾತ್ರ ಪಡಿತರ ಧಾನ್ಯ ವಿತರಣೆ ಮಾಡುತ್ತಿದ್ದು, ಹೀಗಾಗಿ ನಮ್ಮ ಸರದಿ ಬರುವವರೆಗೆ ಕಾಯಬೇಕಾಗಿದೆ. ಇದೇ ರೀತಿ ಜಂಗ್ಲಿಪೇಟ್ನ ನ್ಯಾಯಬೆಲೆ ಅಂಗಡಿ ಮಹೇಶ ಪಾಟೀಲ ಅವರು ಜು. 15ರ ಪಡಿತರ ಧಾನ್ಯ ವಿತರಣೆ ಆರಂಭಿಸಲಾಗುವುದು ಎಂದು ತಿಳಿಸಿದ್ದು, ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಅವರಿಂದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರ ತರಾತುರಿಯಲ್ಲಿ ಅನ್ನಭಾಗ್ಯ ಯೋಜನೆಗೆ ಶ್ರೀಕಾರವೇನೋ ಹಾಡಿದೆ. ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕಿದೆ.
ಆರಂಭಿಕ ತೊಂದರೆ ಸಹಜ
ಜಿಲ್ಲೆ ಮತ್ತು ಹುಬ್ಬಳ್ಳಿ ನಗರದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಅಗತ್ಯ ಅಕ್ಕಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಆದರೆ ಕೆಲವೊಂದು ಆರಂಭಿಕ ಸಮಸ್ಯೆಗಳಿದ್ದು, ಇವುಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಂತ್ಯೋದಯ ಸೇರಿದಂತೆ ಒಟ್ಟು 2,94,927 ಬಿಪಿಎಲ್ ಪಡಿತರ ಕುಟುಂಬಗಳಿವೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯಲ್ಲಿ ಎಸ್ಡಬ್ಲ್ಯೂಪಿಓ ತೂಕದ ಯಂತ್ರಗಳ ಅನುಷ್ಠಾನ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಈ ಹಿಂದೆ ಯುನಿಟ್ ಆಧಾರದ ಮೇಲೆ ಪಡಿತರ ವಿತರಿಸಲಾಗುತ್ತಿತ್ತು. ಈಗ 30 ಕೆಜಿ ಅಕ್ಕಿ ನೀಡುವುದಕ್ಕೆ ಸರ್ಕಾರ ತೀರ್ಮಾನಿಸಿರುವುದರಿಂದ ಎಸ್ಡಬ್ಲ್ಯೂಪಿಓ ತೂಕದ ತಂತ್ರಾಂಶದಲ್ಲಿ ಬದಲಾವಣೆ ಮಾಡಬೇಕಿದ್ದು, ಈ ಕೆಲಸ ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
- ಸತೀಶ ಪಾಗಾದ