ಇದು ಅಹಿಂದ ಬಜೆಟ್
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮತಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಬಜೆಟ್ ಮುಖಾಂತರ ಮಾಡಿದ್ದಾರೆ ಎಂದು ಕೆಸಿಸಿಐ ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುವ ತೀರ್ಮಾನ, ಪರಿಶಿಷ್ಟ ವರ್ಗದ ಧಾರ್ಮಿಕ ಸಂಸ್ಥೆಗಳಿಗೆ ಆರ್ಥಿಕ ನೆರವು, ಅಲ್ಪಸಂಖ್ಯಾತ ಸಮುದಾಯ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡುವುದಕ್ಕೆ ಬಜೆಟ್‌ನಲ್ಲಿ ಹೇಳಿರುವುದನ್ನು ನೋಡಿದರೆ ಇದೊಂದು ಅಹಿಂದ ಬಜೆಟ್‌ನಂತೆ ಕಾಣಿಸುತ್ತಿದ್ದು, ಸಮಾಜದ ಇನ್ನುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ರೈತರಿಗೆ ರಿಯಾಯಿತಿ ಮತ್ತು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ, ಕೃಷಿ ಉಪಯೋಗಕ್ಕೆ ಖರೀದಿಸುವ ಟ್ರ್ಯಾಕ್ಟರ್‌ಗೆ ತೆರಿಗೆ ರಿಯಾಯಿತಿ, ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ರು. 40 ಕೋಟಿ ಮೀಸಲು ಇರಿಸಿರುವ ಕ್ರಮಗಳು ಸ್ವಾಗತಾರ್ಹ ಎಂದು ತಿಳಿಸಿರುವ ಗಿಣಿಮಾವ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕೆಸಿಸಿಐ ಸಲ್ಲಿಸಿದ ಯಾವುದೇ ಪ್ರಸ್ತಾವನೆಗಳಿಗೆ ಸರ್ಕಾರ ಮನಸ್ಸು ಮಾಡಿಲ್ಲ. ಎಪಿಎಂಸಿ ಸೆಸ್ ದರ ಇಳಿಕೆ, ನೆರೆ ರಾಜ್ಯಗಳಲ್ಲಿ ಅಟೋಮೊಬೈಲ್ ವಲಯದ ಮೇಲೆ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಆದರೆ ರಾಜ್ಯದಲ್ಲಿ ಈ ವಲಯದ ವಹಿವಾಟಿನ ಮೇಲೆ ಶೇ. 14.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಪಶು ಆಹಾರದ ಮೇಲಿನ ತೆರಿಗೆ ಪ್ರಮಾಣ ಕಡಿಮೆಗೊಳಿಸಲು ವಿನಂತಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ಈ ಅಂಶವನ್ನು ಕೂಡ ಪರಿಗಣಿಸಿಲ್ಲ ಎಂದು ಅವರು ತಿಳಿಸಿದ್ದಾರೆ.