ಕುಂದಗೋಳ-ರಾಮನಕೊಪ್ಪ ರಸ್ತೆ ಕಳಪೆ
ಶೀತಲ ಎಸ್. ಮುರಗಿ
ಕುಂದಗೋಳ: ಸುಸಜ್ಜಿತ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಹರಿದು ಬರುತ್ತಿದ್ದರೂ ಅಧಿಕಾರಿಗಳ, ಗುತ್ತಿಗೆದಾರರ ಬೇಜವಾಬ್ದಾರಿಯಿಂದ ರಸ್ತೆಗಳು ಹೇಗೆ ಕಳಪೆಯಾಗುತ್ತವೆ ಎನ್ನುವುದಕ್ಕೆ ಕುಂದಗೋಳ-ರಾಮನಕೊಪ್ಪ ರಸ್ತೆ ಸಾಕ್ಷಿ.
ಈ ಕುರಿತು ಪ್ರಯಾಣಿಕರು ಡಾಂಬರೀಕರಣ ಕಳಪೆಯಾಗುತ್ತಿದೆ ಎಂದು ಪತ್ರಿಕೆಗೆ ತಿಳಿಸಿದಾಗ ಲೋಕೋಪಯೋಗಿ ಇಲಾಖೆಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ರಸ್ತೆಯ ಸಂಪೂರ್ಣ ಮಾಹಿತಿ ಪಡೆದು ನೋಡಿದರೆ ಮೇಲ್ನೋಟಕ್ಕೆ ಕಳಪೆಯಾಗಿದ್ದು ಕಂಡುಬಂತು.
ಇಲ್ಲಿ ಎಲ್ಲ ಗಾಳಿಗೆ: ನವೆಂಬರ್ 30, 2013ಕ್ಕೆ ಪೂರ್ಣಗೊಳ್ಳಬೇಕಾದ ಈ ರಸ್ತೆಗೆ ಬಳಸಿದ ವಸ್ತುಗಳು ಗುಣಮಟ್ಟವಿಲ್ಲದ ಕಾರಣ ಮಾಡಿದ ರಸ್ತೆ ಈಗಾಗಲೇ ಕೀಳುತ್ತಿದೆ. ಇದು ಇಲಾಖಾ ಅಧಿಕಾರಿಗಳು ಎಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಪುಷ್ಟಿ ನೀಡುತ್ತವೆ. ಅಂದಾಜು ರು. 900 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಹಂತದಲ್ಲೇ ಹಾಳಾಗಿರುವುದು ರಸ್ತೆ ಗುಣಮಟ್ಟ ತೋರಿಸುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ 2.85 ಬಾಕ್ಸ್ ಕಟಿಂಗ ಮಾಡಿ 18 ಸೆಂ.ಮೀ ದಪ್ಪ ಮುರ್ರಂ ಹಾಕಿ, ಮೇಲ್ಗಡೆ 15 ಸೆಂ.ಮೀ. ದಪ್ಪ ಜಿಎಸ್‌ಬಿ ಹಾಕಬೇಕು. 5.50 ಮೀ ಅಗಲದ ರಸ್ತೆಗೆ 25ಸೆಂ.ಮೀ. ದಪ್ಪ ಮಿಕ್ಸ ಮೆಕ್‌ಡಂ ಹಾಕಬೇಕು. ಜತೆಗೆ ಪ್ರೈಮರ್ ಕೊಟ್, ಟ್ಯಾಕ್ ಕೋಟ್, ಬಿಟುಮೆನಸ್, ಮೆಕಡಂ ಮತ್ತು ಎಂಎಸ್‌ಎಸ್ 'ಬಿ' ಟೈಪ್ ಡಾಂಬರೀಕರಣ ಮಾಡಬೇಕೆಂಬ ನಿಯಮ ಇದ್ದು, ಆದರೆ ಅದೆಲ್ಲವನ್ನು ಇಲ್ಲಿ ಗಾಳಿಗೆ ತೂರಿದಂತಾಗಿದೆ.