ಕೃತಿಗಳು ಓದುಗರಿಗೆ ತಲುಪುತ್ತಿಲ್ಲ
ಧಾರವಾಡ: ಒಂದೆರಡು ವರ್ಷದಲ್ಲಿ ಆರು ಸಾವಿರಕ್ಕೂ ಹೆಚ್ಚು ಕೃತಿಗಳು ಮುದ್ರಣಗೊಂಡು ಹೊರಬಿದ್ದಿವೆ. ಆದರೆ, ಬಹುಪಾಲು ಕೃತಿಗಳು ಓದುಗರ ಕಣ್ಣಿಗೆ ಬೀಳುತ್ತಿಲ್ಲ ಎಂದು ಸಾಹಿತಿ ಜಗದೀಶ ಕೊಪ್ಪ ವಿಷಾದ ವ್ಯಕ್ತಪಡಿಸಿದರು.
ಬಳ್ಳಾರಿಯ ಲೋಹಿಯಾ ಪ್ರಕಾಶನದ ವತಿಯಿಂದ ಇಲ್ಲಿನ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ನಡೆದ ವೆಂಕಟೇಶ ಮಾಚಕನೂರ ಅವರ ಮರಳುಗಾಡಿನ ಬೆಡಗು ಹಾಗೂ ರಂಜಾನ್ ದರ್ಗಾ ಅವರ ಜಾತಿ ವ್ಯವಸ್ಥೆಗೆ ಸವಾಲಾದ ಶರಣರು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಹೆಚ್ಚಾನು ಹೆಚ್ಚು ಲೇಖಕರು ತಮ್ಮ ಪ್ರವಾಸ ಕಥನವನ್ನು ವೈಯಕ್ತಿಕ ವ್ಯಸನಗಳಿಗೆ ಮೀಸಲಿಡುತ್ತಿದ್ದಾರೆ. ಮಾಚಕನೂರ ಅವರ ಪ್ರವಾಸ ಕಥನ ಕೇವಲ ಕಥನವಲ್ಲ. ಅವರು ಇಡೀ ರಾಜಸ್ಥಾನದ ಇತಿಹಾಸವನ್ನು ಮೆಲಕು ಹಾಕಿದ್ದಾರೆ. ಅಲ್ಲದೇ, ರಾಜಸ್ಥಾನದ ಸಂಸ್ಕೃತಿ, ಇತಿಹಾಸ ಮತ್ತು ಅಲ್ಲಿ ನಡೆದಂತಹ ಯುದ್ಧದ ಭೀಕರತೆ ಹಾಗೂ ಜನರ ಬದುಕಿನ ಬವಣೆಗಳನ್ನು ಬಹು ಸ್ಪಷ್ಟವಾಗಿ ತಿಳಿಸಿದ್ದಾರೆ. ಬಡತನದಲ್ಲಿ ಸೃಜನಶೀಲತೆ, ಕಲೆ ಇರುತ್ತದೆ ಎಂಬುವುದನ್ನು ಮಾಚಕನೂರರ ಮರಳುಗಾಡಿನ ಬೆಡಗು ಕೃತಿ ಓದಿದಾಗ ಗೊತ್ತಾಗುತ್ತದೆ. ಆಧುನಿಕತೆ, ಜಾಗತೀಕರಣವನ್ನು ನಮ್ಮನ್ನು ಅಪ್ಪಿಕೊಳ್ಳುತ್ತಿವೆ ಎಂಬುವುದನ್ನು ಅವರು ಕಥನದಲ್ಲಿ ವಿವರಿಸಿದ್ದಾರೆ ಎಂದರು.
ರಂಜಾನ್ ದರ್ಗಾ ಅವರ ಜಾತಿ ವ್ಯವಸ್ಥೆಗೆ ಸವಾಲಾದ ಶರಣರು ಕೃತಿ ಕುರಿತು ಚಿಂತಕ ಡಾ. ಟಿ.ಆರ್. ಚಂದ್ರಶೇಖರ ಪರಿಚಯಿಸಿದರು. ರಂಜಾನ್ ದರ್ಗಾ, ವೆಂಕಟೇಶ ಮಾಚಕನೂರ ಮಾತನಾಡಿದರು. ಸಾಹಿತಿ ಗುರುಲಿಂಗ ಕಾಪ್ಸೆ ಅಧ್ಯಕ್ಷತೆ ವಹಿಸಿದ್ದರು. ಸಿ. ಚನ್ನಬಸಯ್ಯಾ, ಅಲ್ಲಮಪ್ರಭು ಬೆಟದೂರ ಇದ್ದರು.