ಬದುಕು ಜಯಿಸಲು ಗುರು ಬೆಳಕು ಬೇಕು
ಧಾರವಾಡ: ಅನೇಕ ಜಂಜಾಟ-ದ್ವಂದ್ವಗಳಿಂದ ಸುತ್ತುವರೆದ ಬದುಕನ್ನು ಜಯಿಸಲು ಗುರುಕಾರುಣ್ಯದ ಬೆಳಕು ಮನುಕುಲಕ್ಕೆ ಬೇಕಾಗಿದೆ ಎಂದು ಬೆಳಗಾವಿಯ ಮುರುಗೋಡ ಹಿರೇಮಠದ ಉಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಲಿಂಗೈಕ್ಯ ಗುರುಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಸಂಸ್ಮರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿರಂತರ ಶಿವಯೋಗ ಸಾಧನೆಯಲ್ಲಿಯೇ ತನ್ಮಯರಾಗಿ ತಪೋನಿಷ್ಠರಾಗಿದ್ದ ಲಿಂಗೈಕ್ಯ ಗುರುಶಾಂತಲಿಂಗ ಶಿವಾಚಾರ್ಯರು ಭಕ್ತ ಸಂಕುಲವನ್ನು ಧರ್ಮದ ರಹದಾರಿಯಲ್ಲಿ ಮುನ್ನಡೆಸಲು ಶ್ರಮಿಸಿದ್ದರು ಎಂದರು.
ಪಂಚಗೃಹ ಹಿರೇಮಠ ಹಿರಿಯ ಶಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಿರಿಯ ಶಾಂತಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಬಿಜಾಪುರ ಜಿಲ್ಲೆ ಹರನಾಳ ಹಿರೇಮಠದ ಪಟ್ಟಾಧ್ಯಕ್ಷ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಗ್ರಾಮದ ಶ್ರೀಮದ್ವೀರಶೈವ ಜಂಗಮ ಸಮಾಜದ ಮಲ್ಲಿಕಾರ್ಜುನಸ್ವಾಮಿ ಆರಾಧ್ಯಮಠ, ಸಿದ್ಧಯ್ಯಸ್ವಾಮಿ ಕಾಳಗಿ ಮತ್ತಿತರರು ಇದ್ದರು.
ವಿನಾಯಕ ಹಿರೇಮಠ ಸ್ವಾಗತಿಸಿದರು. ಕೊಟ್ರೇಶ ಹಿರೇಮಠ ನಿರೂಪಿಸಿದರು. ತವನರಾಜ ದೇಸಾಯಿ ವಂದಿಸಿದರು.