ಬಿಜೆಪಿ ಜಿಲ್ಲಾಧ್ಯಕ್ಷರ ಘೋಷಣೆ ಅಷ್ಟೆ ಬಾಕಿ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 12
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿದ್ದು, ಭಾನುವಾರ ತಪ್ಪಿದರೆ ಸೋಮವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ಎಲ್ಲ ಜಿಲ್ಲಾ ಹಾಗೂ ಮಹಾನಗರ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಬೆಂಗಳೂರಿನಲ್ಲಿ ಪೂರ್ಣಗೊಂಡಿದೆ. ಈ ಕುರಿತು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ಬಜೆಟ್ ಮಂಡನೆಗೆ ಮುಂಚೆ ಹಾಗೂ ನಂತರ ಒಟ್ಟು ಎರಡು ಬಾರಿ ಸಭೆ ನಡೆದಿದ್ದು, ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಆಯ್ಕೆಯ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ಗೆ ನೀಡಲಾಗಿದೆ. ಈ ಇಬ್ಬರೂ ಮುಖಂಡರು ತೆಗೆದುಕೊಳ್ಳುವ ನಿರ್ಧಾರ ಮೇಲೆ ಅಧ್ಯಕ್ಷರ ಆಯ್ಕೆ ಅಂತಿಮಗೊಳ್ಳಲಿದೆ. ಮೂಲಗಳ ಪ್ರಕಾರ ಎರಡೂ ಘಟಕಗಳ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿದೆ. ಆದರೆ, ಅಧ್ಯಕ್ಷ ಪಟ್ಟದಿಂದ ವಂಚಿತರು ಇತರ ಸ್ಪರ್ಧಿಗಳ ಮನವೊಲಿಸುವ ಕಾರ್ಯ ಮಾಡಿದ ನಂತರ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಶನಿವಾರ ನಗರಕ್ಕೆ ಆಗಮಿಸಲಿದ್ದು, ಅಂದು ಆಕಾಂಕ್ಷಿಗಳನ್ನು ಕರೆದು ಮಾತುಕತೆ ನಡೆಸಲಿದ್ದಾರೆ. ಶನಿವಾರ ಸಂಜೆ ಅಥವಾ ಭಾನುವಾರ ಅಧ್ಯಕ್ಷ ಹೆಸರು ಬಹಿರಂಗಗೊಳ್ಳಲಿದೆ.
ಇವರಲ್ಲಿ ಯಾರು?: ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಲಿಂಗಾಯತ ಕೋಮಿನವರಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಧಾರವಾಡದ ಈರೇಶ ಅಂಚಟಗೇರಿ ಹಾಗೂ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ರಾದ ಎಸ್ಎಸ್ಕೆ ಸಮಾಜದ ನಾರಾಯಣ ಜರತಾರಘರ ಅವರ ಮಧ್ಯೆ ತೀವ್ರ ಪೈಪೋಟಿ ಇದೆ. ಈರೇಶ ಅಂಚಟಗೇರಿ ಅಥವಾ ನಾರಾಯಣ ಜರತಾರಘರ ಅವರಲ್ಲಿ ಒಬ್ಬರಿಗೆ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮಲ್ಲಿಕಾರ್ಜುನ ಸಾವಕಾರ ಈಗಾಗಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರಿಂದ ಅವರಿಗೆ ಅಧ್ಯಕ್ಷಗಿರಿ ಪಟ್ಟ ಒಲಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.
ಖಚಿತ: ಇನ್ನು ಲಿಂಗಾಯೇತರರನ್ನು ಮಹಾನಗರ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ನಿರ್ಧರಿಸಿದಲ್ಲಿ ಎಸ್ಎಸ್ಕೆ ಸಮಾಜದ ನಾರಾಯಣ ಜರತಾರಘರ ಅಧ್ಯಕ್ಷ ಹುದ್ದೆ ಅಲಂಕರಿಸುವುದು ಖಚಿತ. ಈ ಹಿಂದೆ ಮಾಜಿ ಶಾಸಕ ಅಶೋಕ ಕಾಟವೆ ಮಹಾನಗರ ಜಿಲ್ಲಾಧ್ಯಕ್ಷರಾದ ನಂತರ ಆ ಸಮಾಜಕ್ಕೆ ಮತ್ತೊಮ್ಮೆ ಈ ಹುದ್ದೆ ನೀಡಿಲ್ಲ. ಅವಳಿ ನಗರದಲ್ಲಿ ಎಸ್ಎಸ್ಕೆ ಸಮಾಜದ ಮತಗಳು ಹೆಚ್ಚು ಇದ್ದಿದ್ದರಿಂದ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಜರತಾರಘರ ಅವರನ್ನೇ ಅಂತಿಮವಾಗಿ ಆಯ್ಕೆ ಮಾಡಿದಲ್ಲಿ ಆಶ್ಚರ್ಯವಿಲ್ಲ.
ಕಳೆದ ಬಾರಿ ಹುಬ್ಬಳ್ಳಿಯವರಾದ ಲಿಂಗಾಯತ ಸಮಾಜದ ಮಹೇಶ ಟೆಂಗಿನಕಾಯಿ ಅವರು ಮಹಾನಗರ ಜಿಲ್ಲಾಧ್ಯಕ್ಷರಾಗಿದ್ದರಿಂದ ಈ ಬಾರಿ ಧಾರವಾಡದವರಿಗೆ ಅವಕಾಶ ಕೊಡಬೇಕೆಂಬ ನಿರ್ಧಾರ ಬೆಂಗಳೂರಿನ ಸಭೆಯಲ್ಲಿ ಆಗಿದ್ದಲ್ಲಿ ಈರೇಶ ಅಂಚಟಗೇರಿ ಅಧ್ಯಕ್ಷರಾಗುವುದು ಶತಸಿದ್ಧ. ಹುಬ್ಬಳ್ಳಿಯಲ್ಲಿ ಬಿಜೆಪಿ ಭದ್ರವಾಗಿದ್ದು, ಧಾರವಾಡದಲ್ಲಿ ಪಕ್ಷವನ್ನು ಇನ್ನೂ ಬಲಿಷ್ಠಗೊಳಿಸುವ ಅವಶ್ಯಕತೆ ಇದೆ. ಈ ಕಾರಣದಿಂದಾಗಿ ಕೈಗೊಳ್ಳುವ ನಿರ್ಧಾರ ಈರೇಶ ಅಂಚಟಗೇರಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಇನ್ನು ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷಗಿರಿಗೆ ನವಲಗುಂದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಎಂ.ಆರ್. ಪಾಟೀಲ ಮಧ್ಯೆ ಪೈಪೋಟಿ ನಡೆದಿದೆ. ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಕಳೆದ ಬಾರಿಯ ಅಧ್ಯಕ್ಷ ಷಣ್ಮುಖ ಗುರಿಕಾರ ನವಲಗುಂದ ವಿಧಾನಸಭೆ ಕ್ಷೇತ್ರದವರಾಗಿದ್ದರಿಂದ ಈ ಬಾರಿ ಕುಂದಗೋಳ ಕ್ಷೇತ್ರದವರಿಗೆ ಅವಕಾಶ ಕೊಡಬೇಕೆಂಬ ಒತ್ತಾಯ ಪಕ್ಷದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಎಂ.ಆರ್. ಪಾಟೀಲಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆಯಾದರೂ, ಉತ್ತಮ ಸಂಘಟನೆಕಾರರಾದ ಶಂಕರ ಪಾಟೀಲ ಮುನೇನಕೊಪ್ಪಗೆ ಅಧ್ಯಕ್ಷ ಹುದ್ದೆ ಒಲಿದರೂ ಅಚ್ಚರಿ ಇಲ್ಲ.
2, 3 ದಿನಗಳಲ್ಲಿ ಹು-ಧಾ ಮಹಾನಗರ ಜಿಲ್ಲಾ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಲಾಗಿದೆ. ಹುಬ್ಬಳ್ಳಿಯಲ್ಲಿಯೂ ಮತ್ತೊಮ್ಮೆ ಸಭೆ ನಡೆಸಿ, ಚರ್ಚಿಸಲಾಗುವುದು. ನಂತರ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಾಗುವುದು.
-ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ, ಧಾರವಾಡ ಸಂಸದ
-ಆನಂದ ಅಂಗಡಿ