ಮುಂಗಡ ಪತ್ರ ಅಭಿವೃದ್ಧಿ ಪೂರಕ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಮುಂಗಡ ಪತ್ರ ಅಭಿವೃದ್ಧಿ ಪೂರಕವಾಗಿದ್ದು, ಇದರಲ್ಲಿ ಯಾವುದೇ ಸುಳ್ಳು ಆಶ್ವಾಸನೆಗಳಿಲ್ಲ. ರಾಜ್ಯದ ಪ್ರಗತಿಗೆ ಅಗತ್ಯವಿರುವ ಕೆಲಸಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ರು. 2 ಲಕ್ಷಗಳನ್ನು ಹೆಚ್ಚುವರಿಯಾಗಿ ಅನುದಾನ ನೀಡಿರುವುದು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯ ನಾಗರಿಕ ಸೇವಾ ಕೇಂದ್ರಗಳ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಮಾನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಐಐಐಟಿ ಕೇಂದ್ರ ಸ್ಥಾಪನೆಗೆ ರು. 45 ಕೋಟಿ ಮೀಸಲಾಗಿರಿಸಿರುವುದು ಗ್ರಾಮೀಣ ವಿದ್ಯಾರ್ಥಿಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಇರುವ ಕಾಳಜಿ ವ್ಯಕ್ತಪಡಿಸುತ್ತದೆ. ಶಾಲಾ ಮಕ್ಕಳಿಗೆ ಮೊಬೈಲ್ ಮಾಹಿತಿ ತಂತ್ರಜ್ಞಾನವನ್ನು ಸರ್ಕಾರದ ಮೂಲಕ ಒದಗಿಸುವುದು, ವಿದ್ಯಾರ್ಥಿನಿಯರ ಹಾಜರಾತಿ ಹೆಚ್ಚಿಸಲು ಪ್ರತಿದಿನ ರು. 2 ಸಹಾಯ ಧನದಿಂದ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಂತಾಗಿದೆ. ಕೃಷಿ ಬೆಲೆ ಆಯೋಗ ರಚನೆ ನಿರ್ಧಾರದ ಮೂಲಕ ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಅವರು ತಾವು ನಿಜವಾದ ಕೃಷಿಕನ ಮಗ ಎಂಬುದನ್ನು ಸಾಬೀತುಪಡಿಸಿದ್ದಾರೆ. ರೈತರಿಗೆ ರು. 2 ಲಕ್ಷಗಳ ಬಡ್ಡಿ ರಹಿತ ಸಾಲ ಮತ್ತು ಮುಂದಿನ ರು. 1 ಲಕ್ಷ ಸಾಲಕ್ಕೆ ಕೇವಲ ರು. 1 ಬಡ್ಡಿ ಆಕರಿಸುವ ಮುಖ್ಯಮಂತ್ರಿಯವರ ನಿರ್ಧಾರ ನಿಜವಾಗಿಯೂ ಕೃಷಿಕರಿಗೆ ಬಡ್ಡಿ ಸಾಲಗಳಿಂದ ಮುಕ್ತಿ ನೀಡಿದಂತಾಗಿದೆ. ಇನ್ನುಳಿದ ಸಹಕಾರ ಚುನಾವಣಾ ಆಯೋಗ, ಹುಬ್ಬಳ್ಳಿ-ಧಾರವಾಡ ನಗರಗಳಿಗೆ ವೈಫೈ ಪೈಲೆಟ್ ಯೋಜನೆ ವಿಸ್ತರಣೆ, ಕುಡಿಯುವ ನೀರಿನ ನಿರಂತರ ಯೋಜನೆಯನ್ನು ಗದಗ ನಗರಕ್ಕೆ ಅಳವಡಿಸಿರುವುದು, 6 ಲಕ್ಷ ಕುಟುಂಬಗಳಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ, ಸೌರಶಕ್ತಿ ಆಧಾರಿತ ಪಂಪ್ಸೆಟ್ ವಿತರಣೆ ಮತ್ತಿತರ ಯೋಜನೆಗಳು ಜನಪರ ಮತ್ತು ಪ್ರಜಾಪ್ರಭುತ್ವ ಪರವಾಗಿವೆ ಎಂದು ಶಾಸಕ ಮಾನೆ ಅಭಿಪ್ರಾಯಪಟ್ಟಿದ್ದಾರೆ. ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಡಿ ಮಾಸಾಶನ, ಬಡತನ ರೇಖೆಗಿಂತ ಕೆಳಗಿರುವ ಅವಿವಾಹಿತ 40 ವರ್ಷ ಮೀರಿದ ಮಹಿಳೆಯರಿಗೆ ರು. 500 ಮಾಸಾಶನ, ಹೌಸಿಂಗ್ ಯೋಜನೆಯ ಸಹಾಯ ಧನವನ್ನು ರು. 75 ಸಾವಿರದಿಂದ ರು. 1.20 ಲಕ್ಷಕ್ಕೆ ಏರಿಸಿರುವುದು ಮುಖ್ಯಮಂತ್ರಿಯವರ ಜನಪರ ಕಾಳಜಿ ಸೂಚಿಸುತ್ತದೆ ಎಂದು ಶ್ರೀನಿವಾಸ ಮಾನೆ ತಿಳಿಸಿದ್ದಾರೆ.