ಕಾರ್ಮಿಕರಿಗೆ ಪರಿಹಾರಧನಕ್ಕೆ ಒತ್ತಾಯಿಸಿ ನಾಳೆ ಧರಣಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 13
ಮುಚ್ಚಿ ಹೋಗಿರುವ ನಗರದ ಮರಾಠಾ ಗಲ್ಲಿಯಲ್ಲಿದ್ದ ಡೆಕ್ಕನ್ ಸಿನಿಮಾ ಮಂದಿರದ ಕಾರ್ಮಿಕರಿಗೆ ಪರಿಹಾರ ಧನ ಸೇರಿದಂತೆ ವಿವಿಧ ಬಾಕಿ ಸೌಲಭ್ಯ ನೀಡದಿದ್ದರೆ ಸಿನಿಮಾ ಮಂದಿರದ ಮಾಲೀಕರ ಮನೆ ಎದುರು ಜು. 15ರಂದು ಪ್ರತಿಭಟನೆ ನಡೆಸುವುದಾಗಿ ರಾಜ್ಯ ಚಲನಚಿತ್ರ ಮಂದಿರಗಳ ಕೆಲಸಗಾರರ ಫೆಡರೇಷನ್ ಎಚ್ಚರಿಕೆ ನೀಡಿದೆ.
ಎಐಟಿಯುಸಿ ಸಂಘಟನೆ ಸಹಯೋಗದೊಂದಿಗೆ ನಗರದಲ್ಲಿ ಶನಿವಾರ ಸಭೆ ನಡೆಸಿದ ಫೆಡರೇಷನ್ ಸ್ಥಳೀಯ ಘಟಕದ ಪದಾಧಿಕಾರಿಗಳು, ಪಿಂಟೋ ರಸ್ತೆಯಲ್ಲಿರುವ ಸಿನಿಮಾ ಮಂದಿರದ ಮಾಲೀಕ ಅರುಣ್ ಚೌಧರಿ ಅವರ ಮನೆ ಎದುರು ಅಂದು ಬೆಳಗ್ಗೆ 9.30ರಿಂದ ಪ್ರಟಿಭಟನೆ ನಡೆಸಲು ತೀರ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಭಾಕರ ಬಿಡನಾಳ, ಕಾರ್ಮಿಕರ ಸೇವಾ ಅವಧಿಯಲ್ಲಿ ಭವಿಷ್ಯ ನಿಧಿ ವಂತಿಕೆ ಕಡಿತ ಮಾಡಲಾಗಿದೆ. ಕಡಿತ ಮಾಡಿದ ಕಾರ್ಮಿಕರ ವಂತಿಗೆ ಮತ್ತು ಆಡಳಿತ ವರ್ಗದ ವಂತಿಕೆ ತುಂಬದ ಕಾರಣ ಕಾರ್ಮಿಕರಿಗೆ ಟಾಕೀಜ ಮುಚ್ಚಿದ ನಂತರ ಭವಿಷ್ಯ ನಿಧಿ ಹಣ ಪಡೆಯಲು ಹಾಗೂ ಪಿಂಚಣಿ ಪಡೆಯಲು ಸಾಧ್ಯವಾಗಿಲ್ಲ ಎಂದು ದೂರಿದರು.
ಇಎಸ್ಐ ವಂತಿಗೆ ಕಡಿತ ಮಾಡಿ ಕಾರ್ಮಿಕರ ಮತ್ತು ಆಡಳಿತ ವರ್ಗದ ವಂತಿಕೆ ತುಂಬದ ಕಾರಣ ವೈದ್ಯಕೀಯ ಸವಲತ್ತುಗಳು, ಕಾರ್ಮಿಕರ ರಜೆ ವೇತನ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸವಲತ್ತು ಹಾಗೂ ಟಾಕೀಜ ಮುಚ್ಚಿದರೆ ಅಥವಾ ನೌಕರಿಯಿಂದ ತೆಗೆದರೆ ಇಎಸ್ಐನಿಂದ 6 ತಿಂಗಳ ವೇತನ ಸಿಗುವ ಮತ್ತು ಇನ್ನಿತರ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಮಾಲೀಕರು ತಕ್ಷಣ ಎಲ್ಲ ವಂತಿಗೆಯನ್ನು ಸಂಬಂಧಿಸಿದ ಕಚೇರಿಗೆ ಪಾವತಿಸಿ, ಕಾರ್ಮಿಕರಿಗೆ ಎಲ್ಲ ಸವಲತ್ತುಗಳು ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎ.ಎಸ್. ಫೀರಜಾದೆ, ಕಾಶೀಮಸಾಬ ಗುಡೇನವರ, ಬಿ.ಎ. ಮುಧೋಳ, ಎನ್.ಎ. ಖಾಜಿ, ಮಹಾಂತೇಶ ಹೂಗಾರ, ಈಶ್ವರ ಹಿರೇಮಠ, ಕೃಷ್ಣಾ ಪಿಳ್ಳೆ, ಡಿ.ಡಿ. ಕುಲಕರ್ಣಿ ಮುಂತಾದವರು ಸಭೆಯಲ್ಲಿ ಪಾಲ್ಗೊಂ ಡಿದ್ದರು.