ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಹುಬ್ಬಳ್ಳಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಹಂಚಾಟಿ ಓಣಿಯ ವೃದ್ಧರೊಬ್ಬರು ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಕಾಯಿಲೆಗೆ ಹಲವಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಕಾಯಿಲೆ ಗುಣಮುಖವಾಗದ ಹಿನ್ನೆಲೆಯಲ್ಲಿ ಹಂಚಾಟಿ ಓಣಿಯ ಪಾಂಡುರಂಗ ಸಿದ್ದರಾಮಸಾ ಬೋಚಗೇರಿ ತಮ್ಮ ಮನೆಯ ಮಹಡಿ ಮೇಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಮರಣ ಎಂದು ಪ್ರಕರಣ ದಾಖಲಾಗಿದೆ.
ಪಾದಾಚಾರಿ ಸಾವು
ಧಾರವಾಡ: ಹಿಂಬದಿಯಿಂದ ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೋರ್ವ ಸಾವನಪ್ಪಿದ ಘಟನೆ ನಗರದ ಪ್ರಜೆಂಟೇಶನ್ ಸ್ಕೂಲ್ ಹತ್ತಿರ ಶನಿವಾರ ನಡೆದಿದೆ. ಸಾಧನಕೇರಿ ಮಂಗಳಗಟ್ಟಿ ಪ್ಲಾಟಿನ ನಿವಾಸಿ ಈರಪ್ಪ ಬಾಳಪ್ಪ ರೋಣದ (55) ಮೃತಪಟ್ಟ ವ್ಯಕ್ತಿ. ಬೈಕ್ ಸವಾರ ಪೊಲೀಸ ಹೆಡ್ ಕ್ವಾರ್ಟಸ್‌ನ ಕಿತ್ತಾನಂದ ಸಾಮೂವಲ್ ಬಾರಕೇರ ಎಂದು ಗೊತ್ತಾಗಿದೆ. ಈರಪ್ಪ ರಸ್ತೆ ಪಕ್ಕದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರಿಸ್ತಾನಂದನ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ವಿಮೆ: ನಾಳೆ ಪ್ರಚಾರ
ಧಾರವಾಡ: ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ರಾಜ್ಯದಲ್ಲಿ ರಾಷ್ಟ್ರೀಯ ಕೃಷಿ ವಿಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಕುರಿತು ರೈತರಲ್ಲಿ ತಿಳಿವಳಿಕೆ ಹಾಗೂ ಅರಿವು ಹೆಚ್ಚಿಸಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿಯು ವಿವಿಧ ಚಟುವಟಿಕೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಜು. 15ರಂದು ಬೆಳಗ್ಗೆ 10ಕ್ಕೆ ಸಾಂಕೇತಿಕವಾಗಿ ಉದ್ಘಾಟಿಸುವರು.
ಪ್ರೋತ್ಸಾಹಧನ: ಸಿಎಂಗೆ ಅಭಿನಂದನೆ
ಧಾರವಾಡ: ಆಯವ್ಯಯ ಮಂಡಿಸಿರುವ ಸಿಎಂ ಸಿದ್ದರಾಮಯ್ಯನವರು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹಧನ ಘೋಷಣೆ ಮಾಡಿರುವುದನ್ನು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಸ್ವಾಗತಿಸಿದೆ.
ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ಸಂಘವು, ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಇದೇ ಬಜೆಟ್‌ನಲ್ಲಿ ಮಾಸಿಕ ವೇತನ ನಿಗದಿಪಡಿಸಬೇಕು ಎನ್ನುವ ಬೇಡಿಕೆ ಸಹಿತ ಈಗಿರುವ ಎಲ್ಲ ಕಾಂಪೋನೆಂಟ್‌ಗಳ ಹಣವನ್ನು ಹೆಚ್ಚಿಸಬೇಕು. ಮತ್ತಿತರ ಸೌಕರ್ಯಗಳನ್ನು ನೀಡಬೇಕೆಂದು ಕೋರಲಾಗಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರಿಗೆ ಸಮಸ್ತ ಆಶಾ ಕಾರ್ಯಕರ್ತೆಯರ ಪರವಾಗಿ ಅಭಿನಂದನೆ ಎಂದು ಸಂಘಟನೆ ತಿಳಿಸಿದೆ.
ಧಾರವಾಡ: ಅಪರಿಚಿತ ಯುವಕನ ಕೊಲೆ
ಧಾರವಾಡ: ಇಲ್ಲಿನ ಮಣಿಕಂಠ ನಗರದ ಉತ್ತರ ಬದಿಯಲ್ಲಿ ಗಟಾರನಲ್ಲಿ ಅಪರಿಚಿತ ಯುವಕನ ಕೊಲೆ ಮಾಡಿ ಎಸೆದು ಹೋದ ಘಟನೆ ತಡವಾಗಿ ಬೆಳಕಿದೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆಯೇ ವ್ಯಕ್ತಿಯೋರ್ವನ ತೆಲೆಗೆ ಹೊಡೆದು ಗಟಾರಿನಲ್ಲಿ ಎಸೆದಿದ್ದಾರೆ. ಘಟನೆ ಬಗ್ಗೆ ಶನಿವಾರ ಶಹರ ಠಾಣೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಸುಮಾರು 30 ವರ್ಷದ ಯುವಕನಾಗಿದ್ದು, 5 ಅಡಿ 2 ಇಂಚು ಎತ್ತರ, ಎದೆ ಬಲಭಾಗದಲ್ಲಿ ಲವ್ ಮಾರ್ಕ್ ಹಾಗೂ ಎಂ.ಎಸ್. ಎಂಬ ಹಚ್ಚೆ ಕಲೆ ಇದೆ. ಶರ್ಟ್ ಹಾಗೂ ಪ್ಯಾಂಟು ಧರಿಸಿದ್ದಾನೆ. ಶವ ಸಂಪೂರ್ಣ ಕೊಳೆತಿದೆ. ಅಪರಿಚಿತ ಶವದ ಬಗ್ಗೆ ಸುಳಿವು ಸಿಕ್ಕಲ್ಲಿ ಶಹರ ಪೊಲೀಸ್ ಠಾಣೆ (0836-2233512) ಅಥವಾ ಪೊಲೀಸ್ ಕಂಟ್ರೋಲ್ ರೂಂ (0836-223355) ಇಲ್ಲಿಗೆ ಸಂಪರ್ಕಿಸಬೇಕು.
ಕೃತಿಗಳಿಗೆ ಬಹುಮಾನ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು 2012ನೇ ವರ್ಷದ ಶ್ರೇಷ್ಠ ಮಹಿಳಾ ಕನ್ನಡ ಕೃತಿಗಳಿಗೆ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ ಕೊಡಲು ನಿರ್ಧರಿಸಿದೆ. ಈ ಬಹುಮಾನಕ್ಕೆ ಒಟ್ಟು ಮೂರು ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಂದು ಕೃತಿಗೆ 10,000 ಸಮಾನಾಂತರ ಬಹುಮಾನ ನೀಡಿ ಗೌರವಿಸಲಾಗುವುದು. ಅನುವಾದ ಕೃತಿಯಾಗಿರದೇ ಕನ್ನಡ ಭಾಷೆಯ ಕೃತಿಗಳನ್ನು ಲೇಖಕಿಯರು ಮಾತ್ರ ಕಳುಹಿಸಬೇಕು. ಜನವರಿ 2012ರಿಂದ ಡಿಸೆಂಬರ್ 2012ರ ಮಧ್ಯೆ ಪ್ರಕಟವಾಗಿರಬೇಕು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ವೇಳೆಯಲ್ಲಿ ಸ್ವತ-ಬಂದು ಅಥವಾ ಅಂಚೆಯ ಮೂಲಕ ಪುಸ್ತಕಗಳನ್ನು ಸಲ್ಲಿಸಲು ಆಗಸ್ಟ್ 31 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ದೂ: 0836 2440283 ಸಂಪರ್ಕಿಸಬಹುದು.