ಭಾರತ ವಿಕಾಸ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ
ಧಾರವಾಡ: ಭಾರತ ವಿಕಾಸ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಎಸ್ಸೆಸ್ಸೆಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭವನ್ನು ಇಲ್ಲಿನ ಇನ್ಸ್ಟಿಟ್ಯೂಟ್ ಆಫ್ ಎಂಜಿನೀಯರ್ ಸಭಾ ಭವನದಲ್ಲಿ ಜು. 13ರಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಕ್ಲಾಸಿಕ್ ಎಜುಕೇಶನ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ಉಪ್ಪಾರ, ಸರ್ಪನ್ ಹೈಬ್ರಿಡ್ ಸೀಡ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಜಿ. ಗದಗ್ಗಿಮಠ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಪ್ರಮೋದ ಬಾಸರಕರ್, ಬಿ.ಕೆ. ಕಾಳೆ, ಜಗದೀಶ ಮಳಗಿ, ಉಷಾ ಹಾನಗಲ್ ಭಾಗವಹಿಸಲಿದ್ದಾರೆ ಎಂದು ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಿಲ್ಸನ್ ಮೈಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಮಧುಮೇಹ ಜಾಗೃತಿ ಕಾರ್ಯಕ್ರಮ
ಹುಬ್ಬಳ್ಳಿ: ಹುಬ್ಬಳ್ಳಿಯ ಬೆಟಕಾನ್ ಆಸ್ಪತ್ರೆ ಮತ್ತು ಸೇವೆನ್ ಬೀನ್ಸ್ ಸಹಯೋಗದಲ್ಲಿ ಜು. 14ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರದ ಸೇವೆನ್ಸ್ ಬೀನ್ಸ್ನಲ್ಲಿ ಮಧುಮೇಹ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧುಮೇಹದ ಕುರಿತು ಬೆಟಕಾನ್ ಆಸ್ಪತ್ರೆಯ ಮಧುಮೇಹ ರೋಗ ತಜ್ಞ ಡಾ. ಪ್ರಮೋದ ಹಿರೇಮಠ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಉದ್ಯಾನದಲ್ಲಿಸಾಂಸ್ಕೃತಿಕ ಸಂಜೆ
ಧಾರವಾಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೃಪತುಂಗ ಬೆಟ್ಟ ವಾಯು ವಿಹಾರಿಗಳ ಸಂಘದ ವತಿಯಿಂದ ಹುಬ್ಬಳ್ಳಿಯ ನೃಪತುಂಗಬೆಟ್ಟದ ಬಯಲು ರಂಗ ಮಂದಿರದ ಆವರಣದಲ್ಲಿ ಜು. 14ರಂದು ಸಂಜೆ 6ಕ್ಕೆ ಉದ್ಯಾವನದಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಪಂ. ಸೋಮಶೇಖರ ಮರಡಿಮಠ ಗಾಯನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಾಲಕ ಅಪಹರಣ
ಧಾರವಾಡ: ಇಲ್ಲಿನ ಜೆಎಸ್ಸೆಸ್ ಕಾಲೇಜಿನ ಕ್ಯಾಂಪಸ್ ಕ್ವಾಟರ್ಸ್ನ ಬಾಲಕನೋರ್ವನನ್ನು ಅಪಹರಿಸಿದ ಘಟನೆ ಕಳೆದ ಜು. 2ರಂದು ನಡೆದಿದೆ. ದೇವರಾಜ ಮಾದರ ಅಪಹರಣಗೊಂಡ ಬಾಲಕ. ಮನೆಯ ಹತ್ತಿರದಲ್ಲಿಯೇ ಇದ್ದ ಈತನನ್ನು ಅಪರಿಚಿತರು ಅಪಹರಿಸಿದ್ದಾರೆ ಎಂದು ದೇವರಾಜ ತಂದೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಸನ್ಮಾನ ಕಾರ್ಯಕ್ರಮ
ಧಾರವಾಡ: ಬಸವನಗರ ಅಭಿವೃದ್ಧಿ ಸಂಘ ಹಾಗೂ ಬಸವ ಸಮುದಾಯ ಭವನದ ವತಿಯಿಂದ ಇಲ್ಲಿನ ಶ್ರೀ ಗುರು ಪಂಚಾಕ್ಷರಿ ಕಲ್ಯಾಣ ಮಂಟಪದಲ್ಲಿ ಜು. 14ರಂದು ಬೆಳಗ್ಗೆ 11ಕ್ಕೆ ಸನ್ಮಾನ ಸಮಾರಂಭ ಹಾಗೂ ಬಸವನಗರ ಭಾಗ-1 ಅಭಿವೃದ್ಧಿಪರ ಕೆಲಸಗಳ ಚಾಲನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆ ಸದಸ್ಯ ಬಲರಾಮ ಕುಸುಗಲ್, ಕಲ್ಮೇಶ ಹಾವೇರಿಪೇಠ ಅವರನ್ನು ಸನ್ಮಾನಿಸಲಾಗುತ್ತಿದೆ.
ಯುವಜನೋತ್ಸವ ಇಂದು
ಧಾರವಾಡ: ಕಲಾವಿಕಾಸ ಪರಿಷತ್ ಹಾಗೂ ಸೂರ್ ಸಂಗೀತ ಪ್ರತಿಷ್ಠಾನದ ವತಿಯಿಂದ ಇಲ್ಲಿನ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಜು. 14ರಂದು ಸಂಜೆ 5ಕ್ಕೆ ಕಲಾವಿಕಾಸ ಯುವ ಜನೋತ್ಸವ ಹಮ್ಮಿಕೊಳ್ಳಲಾಗಿದೆ. ಸಂಗೀತ ಮತ್ತು ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ತರ್ಲಘಟ್ಟ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಕಲಾವಿಕಾಸ ಪರಿಷತ್ನ ಕಾರ್ಯಾಧ್ಯಕ್ಷ ಪಂ. ಸಿ.ಕೆ.ಎಚ್. ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಸೂರ್ ಸಂಗೀತ ಪ್ರತಿಷ್ಠಾನದ ಅಧ್ಯಕ್ಷ ಎ.ಎಲ್. ದೇಸಾಯಿ, ಉಪನ್ಯಾಸಕ ಡಾ. ಶಾಂತಾರಾಂ ಹೆಗಡೆ, ಸಾಹಿತಿ ಮೋಹನ ನಾಗಮ್ಮನವರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.