ರಂಗ ಗೀತೆಗಳಿಂದ ಮೋಡಿ ಮಾಡಿದ ಜಯಶ್ರೀ
ಧಾರವಾಡ: ಅವು ಅಂತಿಂಥಾ ಹಾಡುಗಳಲ್ಲ, ಕನ್ನಡದ ಖ್ಯಾತ ನಾಮಾಂಕಿತರು ಬರೆದ, ಸಂಗೀತ ನಿರ್ದೇಶಿಸಿದ ರಂಗ ಗೀತೆಗಳು. ಈ ಗೀತೆಗಳಿಗೆ ತಮ್ಮ ಕಂಚಿನ ಕಂಠ ಸೇರಿಸಿ ಸುಮಾರು ಒಂದು ಗಂಟೆಯ ಕಾಲ ಧಾರವಾಡಿಗರನ್ನು ಮೋಡಿ ಮಾಡಿದ್ದು ರಂಗ ಕಲಾವಿದೆ, ಹಾಡುಗಾರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರು.ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ರಂಗ ಪರಿಸರ ಬಿ.ಜಯಶ್ರೀ ಅವರಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಹತ್ತಕ್ಕೂ ಹೆಚ್ಚು ರಂಗಗೀತೆಗಳನ್ನು ಹಾಡುವ ಮೂಲಕ ತಮ್ಮ 65ರ ವಯಸ್ಸಿನಲ್ಲೂ ಕಂಠದ ಗಟ್ಟಿತನವನ್ನು ತೋರ್ಪಡಿಸಿದರು. ಡಾ. ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕದ ಸದ್ದು, ಗದ್ದಲ ಮಾಡಬ್ಯಾಡ ಆಟದೊಳಗ... ಗೋಪಾಲ ವಾಜಪೇಯಿ ಅವರ ನಾಗಮಂಡಲ ಚಿತ್ರದ ಹಿಂಗಿದ್ದಾಳೊಬ್ಬ ಹುಡುಗಿ, ಹದಿಹರಿಯದ ವಯಸ್ಸಿನ ತುಡಗಿ..., ಗಿರೀಶ ಕಾರ್ನಾಡರು ರಚಿಸಿದ, ಬಿ.ವಿ. ಕಾರಂತರ ಹಯವದನ ನಾಟಕದ ನೀರಿನ ಮೇಲೆ ಚಿತ್ರ ಕೆತ್ತಲಾಗೋದಿಲ್ಲ, ಕತ್ತಿಯು ಗಾಯ ಮಾಡೋದಿಕ್ಕಾಗೋದಿಲ್ಲ, ಅದಕ್ಕೆ ನದಿಗೆ ನೆನಪಿನ ಹಂಗಿಲ್ಲ.... ಹೀಗೆ ಬೇಂದ್ರೆ, ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಜಿ.ಬಿ. ಜೋಶಿ ಅವರ ರಚನೆಯ, ಸಿ. ಅಶ್ವತ್ಥ ಸಂಗೀತದ ಅನೇಕ ಹಾಡುಗಳು ಬಿ.ಜಯಶ್ರೀ ಅವರಿಂದ ಮೊಳಗಿದವು. ರಂಗಕಲಾವಿದ ಶ್ರೀನಿವಾಸ ಕಪ್ಪಣ್ಣ ಮಾತನಾಡಿದರು. ಸಮಾರಂಭದಲ್ಲಿ ರಂಗ ಪರಿಸರದ ಅಧ್ಯಕ್ಷ ವಿಠಲ ಕೊಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಹಿಪ್ಪರಗಿ ಸಿದ್ದರಾಮ ಸ್ವಾಗತಿಸಿದರು. ರಂಗಕರ್ಮಿ ಕೆ. ಜಗ್ಗುಚಂದ್ರ ನಿರೂಪಿಸಿದರು.