ಅಭಿವೃದ್ಧಿ ಅನುಕೂಲಕ್ಕೊ? ಅನಾನುಕೂಲಕ್ಕೊ?
ಹುಬ್ಬಳ್ಳಿ: ಅಭಿವೃದ್ಧಿ ಅನುಕೂಲಕ್ಕೊ ಅಥವಾ ಅನಾನುಕೂಲಕ್ಕೊ ಇಂತಹದ್ದೊಂದು ಪ್ರಶ್ನೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ ನೋಡಿದ ಮೇಲೆ ಸಹಜವಾಗಿ ಉದ್ಭವಿಸುತ್ತದೆ.
ಮಲೆನಾಡ ಸೆರಗಿನ ನಗರದಲ್ಲಿ ಇಂದು ಎಲ್ಲಿ ನೋಡಿದಲ್ಲಿ ಬರಿ ಕೆಂಪು ರಾಡಿಯ ರಸ್ತೆಗಳದ್ದೇ ಕಾರುಬಾರು. ಒಂದು ಗಂಟೆ ಜಿಟಿ ಜಿಟಿ ಮಳೆಯಾದರೆ ಸಾಕು ನಗರದ ಇಡೀ ರಸ್ತೆಗಳೆಲ್ಲ ಕೆಮ್ಮಣ್ಣಿನಿಂದ ಕಂಗೊಳಿಸುತ್ತವೆ. ಮಳೆ ಬಂದು ಹೋದ ನಂತರ ಒಣಗಿದ ರಸ್ತೆಗಳಲ್ಲಿ ಸಂಚರಿಸುವುದು ಅದಕ್ಕಿಂತ ಭೀಕರ. ಏಕೆಂದರೆ ಸಾಲು ಸಾಲಾಗಿ ಸಾಗುವ ವಾಹನಗಳಿಂದ ಏಳುವ ಧೂಳು ಮುಖ ಮೂತಿ ನೋಡದೆ ರಾಚುತ್ತದೆ. ಕೆಲವೊಮ್ಮೆ ದೊಡ್ಡ ಧೂಳಿನ ಕಣಗಳು ಕಣ್ಣಲ್ಲಿ ಸೇರಿ ಯಾಕಪ್ಪಾ ಈ ರಸ್ತೆಯಲ್ಲಿ ಬಂದೆ? ಯಾಕಾದರೂ ಬೇಕಿತ್ತು ಈ ಒಳಚರಂಡಿ ಕಾಮಗಾರಿ ಅನ್ನುವಂತಾಗುತ್ತದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ನೀಡಿದ ಎರಡು ನೂರು ಕೋಟಿ ರು.ಗಳ ವಿಶೇಷ ಅನುದಾನದ ಬಳಕೆ ಈಗ ಆಗುತ್ತಿದೆ. ವರ್ಷದ ಹಿಂದೆ ಪೂರ್ಣಗೊಳ್ಳಬೇಕಿದ್ದ ಒಳಚರಂಡಿ ಕಾಮಗಾರಿಗೆ ಈಗ ವೇಗ ಸಿಕ್ಕಿದೆ. ಇಡೀ ಬೇಸಿಗೆ ಮತ್ತು ಚಳಿಗಾಲವನ್ನು ಬೆಚ್ಚಗೆ ಹೊದ್ದು ಕಳೆದ ಮಹಾನಗರ ಪಾಲಿಕೆ ಭರ್ತಿ ಮಳೆಗಾಲದಲ್ಲಿ ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದೆ. ಮಳೆಗಾಲದಲ್ಲಿ ರಸ್ತೆ ಅಗೆಯುವ ಕೆಲಸದಿಂದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕಿಂಚಿತ್ ಕಾಳಜಿ ವಹಿಸದ ಮಹಾನಗರ ಪಾಲಿಕೆ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಕೈಗೆತ್ತಿಕೊಂಡು ಅಭಿವೃದ್ಧಿಗೆ ಆದ್ಯತೆ ಎನ್ನುವ ಸಂದೇಶ ಈ ವರ್ಗದಿಂದ ರವಾನೆಯಾಗುತ್ತಿದೆ.
ಹುಬ್ಬಳ್ಳಿ ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದಿರುವ ಒಳಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ನಗರದ ಸಂಚಾರ ವ್ಯವಸ್ಥೆಯಂತೂ ಹೇಳತೀರದಷ್ಟು ಹದಗೆಟ್ಟಿದೆ. ನಗರ ಸಾರಿಗೆ ಬಸ್ಗಳಂತೂ ಯಾವ ದಿಕ್ಕಿನಿಂದ ಹೇಗೆ ವಿವಿಧ ಬಡಾವಣೆಗಳಿಗೆ ಹೋಗುತ್ತಿವೆ ಎನ್ನುವುದು ತಿಳಿಯಲಿಕ್ಕಾಗದೇ ಜನರು ಪರದಾಡುತ್ತಿದ್ದು, ಇದು ಇನ್ನೂ ಎಷ್ಟು ದಿನ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಟ್ರಾಫಿಕ್ ಸಮಸ್ಯೆ: ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿಯಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ಟ್ರಾಫಿಕ್ ಸಮಸ್ಯೆ ನಿತ್ಯದ್ದು ಎನ್ನುವಂತಾಗಿದೆ. ಎರಡು ದಿನಗಳ ಹಿಂದೆಯಷ್ಟೆ ನಗರದ ದುರ್ಗದ ಬೈಲ್ ಬಳಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದ ಸ್ಥಳದಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸೇರಿದ ಬಸ್ಸು ಮತ್ತು ಖಾಸಗಿ ಬಸ್ಸೊಂದು ಸಿಕ್ಕಿ ಹಾಕಿಕೊಂಡು ಸುಮಾರು ಎರಡಕ್ಕೂ ಹೆಚ್ಚು ಗಂಟೆಗಳ ಕಾಲ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಬೇಕಿತ್ತಾ ಈಗ ಕೆಲಸ? ಮೂರು ವರ್ಷ ಮೆತ್ತಗೆ ಮಲಗಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಭರ್ತಿ ಮಳೆಗಾಲದಲ್ಲಿ ಕಾಮಗಾರಿ ಮುಂದುವರಿಸುವುದರಿಂದ ಆಗುವ ತೊಂದರೆಗಳ ಬಗ್ಗೆ ಗೊತ್ತಿರಲಿಲ್ಲವಾ? ಈಗಾಗಲೇ ಎರಡು ವರ್ಷ ವಿಳಂಬವಾಗಿರುವ ಕಾಮಗಾರಿಯನ್ನು ಮಳೆಗಾಲದಲ್ಲೇ ಪೂರ್ಣಗೊಳಿಸುವುದಕ್ಕೆ ಈ ಜೆಸಿಬಿ ಯಂತ್ರಗಳನ್ನು ಕೆಲಸಕ್ಕೆ ಹಚ್ಚಿ ಅತ್ತ ಜನರಿಗೆ ಏಕೆ ತೊಂದರೆ ಕೊಡಬೇಕಿತ್ತು ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ. ಒಟ್ಟಾರೆಯಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಯಾರನ್ನೋ ತೃಪ್ತಿಪಡಿಸುವುದಕ್ಕೆ ಅಥವಾ ನನೆಗುದಿಗೆ ಹಾಕಿದ್ದ ಕಾಮಗಾರಿಯನ್ನು ಜನರಿಗೆ ತೊಂದರೆಯಾಗಿ ಅವರಿಂದ ಹಿಡಿಶಾಪ ಹಾಕಿಸಿಕೊಂಡರೂ ಪರವಾಗಿಲ್ಲ ನಮ್ಮ ಕೆಲಸ ನಾವು ಮಾಡೇ ಸಿದ್ಧ ಎನ್ನುವಂತೆ ತರಾತುರಿಯಲ್ಲಿ ಯೋಜಿತ ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಭರಾಟೆಯಲ್ಲಿ ಹುಬ್ಬಳ್ಳಿಗ ನುಜ್ಜುಗುಜ್ಜಾಗುತ್ತಿದ್ದಾನೆ.