ಯಶಸ್ವಿ ನಿರ್ಮಲ ಜಾಗೃತಿ ಕಾರ್ಯಕ್ರಮ
ಧಾರವಾಡ: ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಡಕೋಡ ಹಾಗೂ ಗರಗ ಗ್ರಾಪಂಗಳ ಸಹಯೋಗದಲ್ಲಿ ಗುರುವಾರ ನಿರ್ಮಲ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ತಾಪಂ ಉಪಾಧ್ಯಕ್ಷ ಈರಪ್ಪ ಕರಿಲಿಂಗಣ್ಣವರ ಉದ್ಘಾಟಿಸಿ, ತಾಲೂಕಿನ ಎಲ್ಲ 37 ಗ್ರಾಪಂಗಳ ವಂತಿಗೆ ಮೂಲಕ ಹಣ ಕ್ರೋಡೀಕರಿಸಿ ಸಕ್ಕಿಂಗ್ ಯಂತ್ರ ಖರೀದಿಸಲಾಗಿದ್ದು, ಜನರು ಇಂಧನ ವೆಚ್ಚ ನೀಡಿ ತಾವು ಬಳಸುವ ಶೌಚಾಲಯಗಳ ಸೆಪ್ಟಿಕ್ ಟ್ಯಾಂಕ್‌ಗಳನ್ನು ಖಾಲಿ ಮಾಡಿಸಲು ಇದರಿಂದ ಅನುಕೂಲವಾಗಲಿದೆ. ತಾಲೂಕಿನ ಎಲ್ಲ ಗ್ರಾಮಗಳ ಜನರು ತಪ್ಪದೇ ಶೌಚಾಲಯ ಕಟ್ಟಿಸಿ ಅದರ ಬಳಕೆಗೆ ಮುಂದಾಗಿ ಯೋಜನೆ ಯಶಸ್ವಿಗೊಳಿಸಬೇಕು. ಗ್ರಾಮದ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಹೇಳಿದರು. ಗ್ರಾಪಂ ಸದಸ್ಯ ಬಸವರಾಜ ಬಾರಕೇರ, ಶಿವನಗೌಡ, ಮಹಾಂತೇಶ ಅಬ್ಬಾರ, ಶೈಲಜಾ ಅಬ್ಬಾರ ಇದ್ದರು. ನಂತರ ಗರಗದಲ್ಲಿ ಜರುಗಿದ ಕಾರ್ಯಕ್ರಮವನ್ನು ಗ್ರಾಪಂ ಸದಸ್ಯೆ ಪಾರ್ವತಿ ಉಳ್ಳವಣ್ಣವರ ಉದ್ಘಾಟಿಸಿದರು. ಗರಗ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಕಿಲ್ಲೇದಾರ ಮಾತನಾಡಿದರು. ನಿಂಗಯ್ಯ ಹೂಗಾರ, ಭಾರತಿ ಹೊಸಮನಿ, ಸಂಗಮ್ಮ ಕಂಬಾರ ಹಾಗೂ ಗರಗದ ಸರಸ್ವತಿ ಹಮ್ಮಗಿ, ಸಾವಿತ್ರಿ ಕಮ್ಮಾರ ಇದ್ದರು.