ಅಳ್ನಾವರ ಕ್ರೀಡಾಂಗಣ ಕಾಮಗಾರಿಗೆ ಗ್ರಹಣ
ಧಾರವಾಡ: 75 ಲಕ್ಷ ವೆಚ್ಚದಲ್ಲಿ 2012ರಲ್ಲಿಯೇ ನಿರ್ಮಾಣವಾಗಿರಬೇಕಿದ್ದ 35ಕಿ.ಮೀ. ದೂರದ ಅಳ್ನಾವರ ಪಟ್ಟಣದ ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಒಂದು ವರ್ಷದಿಂದ ಗ್ರಹಣ ಬಡಿದುಕೊಂಡಿದೆ.
2 ವರ್ಷಗಳ ಹಿಂದೆ ಕ್ರೀಡಾಂಗಣಕ್ಕೆ ರು. 75 ಲಕ್ಷ ಬಿಡುಗಡೆಯಾಗಿದ್ದು, ಇನ್ನೇನು, ಎಂಟು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಯಿತು ಎಂಬ ಕನಸು ಹೊತ್ತ ಅಳ್ನಾವರದ ಜನತೆಗೆ ಪ್ರಸ್ತುತ ನಿರಾಸೆ ಮೂಡಿಸಿದೆ. ಎರಡು ವರ್ಷಗಳಾದರೂ ಕ್ರೀಡಾಂಗಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವರ್ಷದಿಂದ ಕಾಮಗಾರಿ ಸ್ತಬ್ಧವಾಗಿದೆ. ಉದ್ದೇಶಿತ ಕ್ರೀಡಾಂಗಣದ ಜಾಗವನ್ನು ಸಮತಟ್ಟುಗೊಳಿಸಿ ಒಂದು ಗೋಡೆಯನ್ನು ಕಟ್ಟಿದ್ದು ಬಿಟ್ಟರೆ ಮತ್ತಾವ ಹೇಳಿಕೊಳ್ಳುವ ಕೆಲಸ ಆಗಿಲ್ಲ.
2011ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಭೂಮಿಪೂಜೆ ನೆರವೇರಿಸಿದ್ದರು. ಭಾಷಣದಲ್ಲಿ ಮುಂದಿನ ವರ್ಷದ ಅವಧಿಯಲ್ಲಿ ಮೈದಾನವನ್ನು ಸಿದ್ಧಗೊಳಿಸಿ ಸಾರ್ವಜನಿಕರಿಗೆ ಮುಕ್ತಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಪೂರ್ಣಗೊಳ್ಳುವುದು ಒಂದೆಡೆಯಿರಲಿ ಕ್ರೀಡಾಂಗಣದ ಕಾಮಗಾರಿ ಶೇ. 40 ಆಗದಿರುವುದು ಕ್ರೀಡಾ ಇಲಾಖೆ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಸಂಶಯಕ್ಕೆ ಕಾರಣವಾದ ಕಾಮಗಾರಿ
ಶೇ. 40ರಷ್ಟು ಕಾಮಗಾರಿಗೆ ಕ್ರೀಡಾಂಗಣದ ಪೂರ್ತಿ ಕಾಮಗಾರಿಗೆ ಬಿಡುಗಡೆಯಾಗಿದ್ದ ಒಟ್ಟು ರು. 75 ಲಕ್ಷ ಖರ್ಚಾಗಿದ್ದು, ಮತ್ತೇ ರು. 25 ಲಕ್ಷ ಮಂಜೂರು ಮಾಡಬೇಕೆಂದು ಕಾಮಗಾರಿ ಗುತ್ತಿಗೆ ಪಡೆದ ಭೂ ಸೇನಾ ನಿಗಮವು ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟಿರುವುದು ಸ್ಥಳೀಯರ ಸಂಶಯಕ್ಕೆ ಕಾರಣವಾಗಿದೆ. ಕ್ರೀಡಾ ಚಟುವಟಿಕೆಗೆ ದೂರದ ಧಾರವಾಡ ಅಥವಾ ದಾಂಡೇಲಿಗೆ ಹೋಗಬೇಕಿದ್ದ ತಾಲೂಕಿನ ಅಳ್ನಾವರದ ಕ್ರೀಡಾಪಟುಗಳಿಗೆ, ಕ್ರೀಡಾಸಕ್ತರಿಗೆ ಬೇಕಿದ್ದ ಈ ಕ್ರೀಡಾಂಗಣದ ಕಾಮಗಾರಿ ವಿಳಂಬವಾಗಿದ್ದು, ಅಲ್ಲಿನ ಜನತೆಗೆ ಮಾತ್ರ ತೀರಾ ನಿರಾಸೆ ಹುಟ್ಟಿಸಿದೆ.
ಸರ್ಕಾರ 2003ರಲ್ಲಿ ಅಳ್ನಾವರ ಪಟ್ಟಣದ ಮಧ್ಯದಲ್ಲಿ 5 ಎಕರೆ ಜಾಗ ಮೈದಾನಕ್ಕಾಗಿ ಕಾಯ್ದಿರಿಸಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ನಂತರ 2010ರಲ್ಲಿ ಅಲ್ಲಿನ ಶಾಸಕರಾದ ಸಂತೋಷ ಲಾಡ್, ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಡಿಸಿ ದರ್ಪಣ ಜೈನ್ ಆಸಕ್ತಿ ಫಲವಾಗಿ 5 ಎಕರೆ ಜತೆಗೆ ಮತ್ತೆ 3 ಎಕರೆ ಜಾಗ ಪಡೆಯುವ ಮೂಲಕ ಒಟ್ಟು 8 ಎಕರೆ ವಿಶಾಲ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣ 2011ರಿಂದ ಆರಂಭವಾಗಿತ್ತು.
ಗ್ರಹಣ ಬಿಡಿಸಲಿ: ಕ್ರೀಡಾಂಗಣವು ಅಳ್ನಾವರಿಂದ ಹಳಿಯಾಳಕ್ಕೆ ಹೋಗುವ ಮುಖ್ಯರಸ್ತೆಯ ಬಲಬದಿಯಲ್ಲಿ ನಿರ್ಮಾಣವಾಗುತ್ತಿದ್ದು, ಈ ಜಾಗದ ಸುತ್ತಲೂ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳಿವೆ. ಕೇವಲ ವಿದ್ಯಾರ್ಥಿ ಹಾಗೂ ಕ್ರೀಡಾಪಟುಗಳಿಗೆ ಮಾತ್ರವಲ್ಲದೇ, ಸುತ್ತಮುತ್ತಲಿನ ಗ್ರಾಮಗಳ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೂ ಇದು ಸಹಾಯವಾಗಲಿದೆ. ಆದರೆ, ಕಾಮಗಾರಿ ಮಾತ್ರ ವಿಳಂಬವಾಗಿದ್ದು, ಪ್ರಸ್ತುತ ಈ ಕ್ಷೇತ್ರದ ಶಾಸಕ ಸಂತೋಷ ಲಾಡ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಕಾಮಗಾರಿಗೆ ಹಿಡಿದ ಗ್ರಹಣ ಬಿಡಿಸಿ ಕ್ರೀಡಾಂಗಣಕ್ಕೆ ಚಾಲನೆ ನೀಡಬೇಕು ಎನ್ನುವುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹ.
ಏನೇನಾಗಬೇಕು?: ಅಳ್ನಾವರ ಪಟ್ಟಣ ಬರುವ ದಿನಗಳಲ್ಲಿ ತಾಲೂಕು ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಅಂತೆಯೇ, ಉದ್ದೇಶಿತ ಕ್ರೀಡಾಂಗಣದಲ್ಲಿ ಪೆವಿಲಿಯನ್ ಕಟ್ಟಡ ಹಾಗೂ ಅದರಲ್ಲಿ ಕ್ರೀಡಾ ಕೊಠಡಿ, ಜಿಮ್ನಾಸ್ಟಿಕ್, ಟೇಬಲ್ ಟೆನ್ನಿಸ್ ಮತ್ತಿತರರೆ ಒಳಾಂಗಣ ಕ್ರೀಡೆಗಳಿಗೆ ಬೇಕಾಗುವ ಸೌಲಭ್ಯ ಕಲ್ಪಿಸಬೇಕಿದೆ. ಸ್ನಾನ ಗೃಹ, ಮೂತ್ರಾಲಯದ ವ್ಯವಸ್ಥೆ ಇರುತ್ತದೆ. 2 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿ ನಿರ್ಮಾಣವಾಗಬೇಕಿದೆ. ಮೈದಾನದಲ್ಲಿ 400 ಮೀ. ರನ್ನಿಂಗ್ ಟ್ರ್ಯಾಕ್, ಫುಟ್ಬಾಲ್, ಹಾಕಿ ಆಡುವ ನಿಗದಿತ ಮೈದಾನ, ಬಾಸ್ಕೆಟ್ಬಾಲ್, ಖೋಖೋ, ಕಬಡ್ಡಿ, ವಾಲಿಬಾಲ್ ಆಡಲು, ಸ್ಪರ್ಧೆಗಳನ್ನು ಏರ್ಪ ಡಿಸಲು ಈ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಬೇಕಿದೆ. ಕ್ರೀಡಾಂಗಣದ ಸುರಕ್ಷತೆಗಾಗಿ ಸುತ್ತಲು ಚೈನ್ ಲಿಂಕ್ ಬೇಲಿ ಸಹ ಹಾಕುವ ಕಾಮಗಾರಿಯಾಗಬೇಕಿದೆ.
- ಬಸವರಾಜ ಹಿರೇಮಠ