ಚೀಟಿ ವ್ಯವಹಾರಕ್ಕೆ ಮಹಿಳೆ ಬಲಿ
ಹುಬ್ಬಳ್ಳಿ: ಚೀಟಿ ವ್ಯವಹಾರದಲ್ಲಿ ಹಣ ತೊಡಗಿಸಿದ್ದ ಮಹಿಳೆಯೊಬ್ಬಳು ಹಣ ಬಾರದ ಹಿನ್ನೆಲೆಯಲ್ಲಿ ಬೇಸರಗೊಂಡು, ಚೀಟಿ ವ್ಯವಹಾರ ಮಾಡುತ್ತಿದ್ದ ಮಹಿಳೆ ಮನೆ ಎದುರು ಸೋಮವಾರ ಬೆಳಗ್ಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೇಶ್ವಾಪುರದ ಸಾಗರ ಕಾಲೋನಿಯ ಸೀಮಾ ಪೂಜಾರಿ(31) ಎಂಬ ಮಹಿಳೆ ಅದೇ ಕಾಲೋನಿಯ ಸುಜಾತಾ ಜೋಸೆಫ್ ಎನ್ನುವ ಮಹಿಳೆ ಮನೆ ಎದುರು ಸೀಮೆ ಎಣ್ಣೆ ಸುರುವಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಚೀಟಿ ವ್ಯವಹಾರ ನಡೆಯುತ್ತಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ ಸೀಮಾ ಅವರಿಗೆ ಅವರಿಗೆ ಅಂದಾಜು 4 ಲಕ್ಷ ಚೀಟಿ ಹಣ ಬರಬೇಕಿತ್ತು. ಆದರೆ, ಚೀಟಿ ವ್ಯವಹಾರ ಮಾಡುತ್ತಿದ್ದ ಸುಜಾತಾ ಹಣ ಪಾವತಿಸಲು ಮೀನಮೇಷ ಎಣಿಸುತ್ತಿದ್ದರು. ಚೀಟಿ ವ್ಯವಹಾರದ ಹಣ ಪಾವತಿಸಿ ಎಂದು ಹಲವಾರು ಬಾರಿ ಸೀಮಾ ಪೂಜಾರಿ ಕೇಳಿದ್ದರೂ ಹಣ ನೀಡದ್ದರಿಂದ ಬೇಸತ್ತ ಅವರು ಸೋಮವಾರ ಬೆಳಗ್ಗೆ ಸುಜಾತಾ ಅವರ ಮನೆಗೆ ಆಗಮಿಸಿ, ಮೈಮೇಲೆ ಸೀಮೆ ಎಣ್ಣೆ ಸುರುವಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತ ಸೀಮಾಳ ಕುಟುಂಬ ಮತ್ತು ಸಂಬಂಧಿಕರು ಸುಜಾತಾ ಅವರು ಉದ್ದೇಶಪೂರ್ವಕವಾಗಿ ಸೀಮಾಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸುಜಾತಾ ಜೋಸೆಫ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ಸುದ್ದಿ ತಿಳಿದ ತಕ್ಷಣ ಡಿಸಿಪಿ ಸುಭಾಷ ಗುಡಿಮನಿ ಸೇರಿದಂತೆ ಕೇಶ್ವಾಪುರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.