ಅನುದಾನದ ದುರುಪಯೋಗವೇ ಹೆಚ್ಚು
ಹುಬ್ಬಳ್ಳಿ: ಅವಳಿ ನಗರದ ಅಭಿವೃದ್ಧಿಗೆ ಸರ್ಕಾರ ನೀಡಿರುವ ರು. 200 ಕೋಟಿ ಅನುದಾನ ಸದುಪಯೋಗವಾಗುತ್ತಿದೆಯೇ?
ಊಹುಂ ಇಲ್ಲ...! ಈಗ ನಡೆದಿರುವ ಒಳಚರಂಡಿ ನಿರ್ಮಾಣ ಕಾಮಗಾರಿ ನೋಡಿದರೆ ಈ ಸಂಶಯ ಬರದೇ ಇರದು.
ಒಳಚರಂಡಿ ಪೈಪ್ಲೈನ್ಗೆ ಬಳಕೆಯಾಗುತ್ತಿರುವ ಸಿಮೆಂಟ್ ಪೈಪ್ಗಳು ಕಳಪೆಮಟ್ಟದ್ದೆಂಬ ಶಂಕೆ ಪೈಪ್ಗಳನ್ನು ವೀಕ್ಷಿಸಿದರೇ ಬರುತ್ತದೆ. ಗಾಂಧಿವಾಡ ರಾಮನಗರದಲ್ಲಿ ಅಳವಡಿಸಲಾಗುತ್ತಿರುವ ಅನೇಕ ಪೈಪ್ಗಳು ಕಳಪೆ ಗುಣಮಟ್ಟದ್ದಾಗಿದ್ದು, ಪೈಪ್ ಜೋಡಿಸುವ ಮೊದಲೇ ಬಿರುಕು ಬಿಟ್ಟಿವೆ. ತರಾತುರಿಯಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಅನೇಕ ಲೋಪದೋಷಗಳು ಇವೆ. ಈ ಪೈಪ್ಗಳನ್ನು ಆದಷ್ಟು ಬೇಗ ಮುಚ್ಚಿ ಹಾಕಬೇಕು ಎನ್ನುವ ಏಕೈಕ ಉದ್ದೇಶದಿಂದ ಭರ್ತಿ ಮಳೆಗಾಲದಲ್ಲಿ ಅದೂ ಜನರಿಗೆ ತೊಂದರೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ.
ನಿಯಮ ಗೊತ್ತಿಲ್ಲವೇ?: ಮಳೆಗಾಲದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬಾರದು. ಕೈಗೆತ್ತಿಕೊಂಡಿದ್ದರೂ ಮಳೆಗಾಲದ ಅವಧಿ ಹೊರತು ಪಡಿಸಿ ಪೂರ್ಣಗೊಳಿಸಬೇಕು ಎಂದು ಇದೇ ಅಧಿಕಾರಿ ವರ್ಗ ನಿಯಮ ಮಾಡಿದೆ. ಆದರೆ ಇಲ್ಲಿ ಆಗುತ್ತಿರುವುದಾದರೂ ಏನು? ಟೆಂಡರ್ ಪ್ರಕ್ರಿಯೆ ಮುಗಿದು ಅನೇಕ ದಿನಗಳ ಹಿಂದೆಯೇ ಕಾರ್ಯಾದೇಶ ಗುತ್ತಿಗೆದಾರರ ಕೈ ಸೇರಿದೆ. ಆದರೆ ಕೆಲಸ ನಡೆಯುತ್ತಿರುವುದು ಮಾತ್ರ ಈಗ. ಇಲ್ಲಿಯವರೆಗೆ ಅಲ್ಲಿಷ್ಟು ಇಲ್ಲಿಷ್ಟು ಕೆಲಸ ಮಾಡಿಕೊಂಡು ಗುತ್ತಿಗೆದಾರರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಬದಲಾಗುತ್ತಿದ್ದಂತೆಯೇ ಕಾಮಗಾರಿಗೆ ವೇಗ ನೀಡಿದ್ದಾರೆ. ಈ ಹುನ್ನಾರದ ಹಿಂದೆ ಅಧಿಕಾರಿ ವರ್ಗದ ಕೈವಾಡ ಇದೆಯೋ ಅಥವಾ ಕಾಣದ ಕೈಗಳ ಪ್ರಭಾವ ಇದೆಯೋ ಎಂಬುದು ಬಹಿರಂಗಗೊಳ್ಳಬೇಕಿದೆ.
ಹೊಣ ಗೇಡಿತನದ ಪರಮಾವಧಿ: ಅಧಿಕಾರಿಗಳ ಹೊಣಗೇಡಿತನಕ್ಕೆ ಅತ್ತ್ಯುತ್ತಮ ಸಾಕ್ಷಿ ಎಂದರೆ ಎರಡು ವರ್ಷಗಳ ಹಿಂದೆ ಪೂರ್ಣಗೊಳಿಸಿದ್ದ ರೇಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿ ಮತ್ತು ಈಗ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ. ಎರಡೂ ಕಾಮಗಾರಿಗಳಿಗೆ ಸರ್ಕಾರ ಒಂದೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿತ್ತು. ಮೊದಲು ರಸ್ತೆ ನಿರ್ಮಿಸಿದ ಅಧಿಕಾರಿಗಳು, ನಂತರ ಆ ರಸ್ತೆ ಅಗೆದು ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡರು. ಒಳಚರಂಡಿ ನಿರ್ಮಿಸುವುದೇ ಆಗಿದ್ದರೆ ರಸ್ತೆ ಏಕೆ ಮಾಡಬೇಕಿತ್ತು ಎಂಬ ಪ್ರಶ್ನೆ ಸಾರ್ವಜನಿಕರದ್ದು. ಸ್ಟೇಷನ್ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ಈಗಾಗಲೇ ಅಗೆದಿರುವ ರಸ್ತೆ ಮರು ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮತ್ತಷ್ಟು ಹಣ ಬಿಡುಗಡೆ ಮಾಡುವುದು ಅನಿವಾರ್ಯ.
ಬೇಕಿದೆ ಉತ್ತರದಾಯಿತ್ವ: ಮಹಾನಗರ ಪಾಲಿಕೆ ಅಧಿಕಾರಿಗಳು ಮಳೆಗಾಲದಲ್ಲಿ ಒಳಚರಂಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಕೇವಲ ಎರಡು ವರ್ಷಗಳ ಹಿಂದೆ ಅಭಿವೃದ್ಧಿಯಾಗಿದ್ದ ರೇಲ್ವೆ ಸ್ಟೇಷನ್ ರಸ್ತೆಯ ಮರು ನಿರ್ಮಾಣಕ್ಕೆ ಮತ್ತೆ ತೆರಿಗೆ ಹಣ ವೆಚ್ಚ ಮಾಡಲಾಗುತ್ತದೆಯೇ ಅಥವಾ ಒಳಚರಂಡಿ ನಿರ್ಮಾಣ ಗುತ್ತಿಗೆಯಲ್ಲಿ ರಸ್ತೆ ಪುನರ್ನಿರ್ಮಾಣಕ್ಕೆ ಅವಕಾಶ ಇದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಗಲಿ ಅಥವಾ ಆಯುಕ್ತರಾಗಲಿ ಇಲ್ಲ.