ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಯಾವುದೂ ಇಲ್ಲ

Lingaraj Badiger
Updated On : 17 Jul 2013, 11:40 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 16
ಹಾವು ಮುಗ್ದ ಪ್ರಾಣಿ. ಅದಕ್ಕೆ ತೊಂದರೆ ಮಾಡಿದರೆ ಮಾತ್ರ ಅದು ಕಚ್ಚುತ್ತದೆ. ಮನುಷ್ಯ ಹಾವು ಕಂಡ ಕೂಡಲೇ ಹೆದರುವುದು ಅಥವಾ ಅದನ್ನು ಕೊಲ್ಲಲು ಮುಂದಾಗುವುದು ಸರಿಯಲ್ಲ. ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಯಾವುದಿಲ್ಲ ಎಂದು ಹಾವು ಸೇರಿದಂತೆ ಪ್ರಾಣಿ-ಪಕ್ಷಿಗಳ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಪ್ರೊ. ಗಂಗಾಧರ ಕಲ್ಲೂರ ಅಭಿಪ್ರಾಯಿಸಿದರು.
ಇಲ್ಲಿನ ಜೆಎಸ್ಸೆಸ್ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಹು-ಧಾ ನಾಗರಿಕ ಪರಿಸರ ಸಮಿತಿ ಹಾಗೂ ಗ್ರೀನ್ ಆರ್ಮಿ ಸಂಸ್ಥೆಗಳು ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಹಾವುಗಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಸುವಿವರ ಮಾಹಿತಿ ನೀಡಿದರು.
ಎಂತಹ ವಿಷಪೂರಿತ ಹಾವಿದ್ದರೂ ಎದುರಿಗಿನ ವ್ಯಕ್ತಿಯ ಮೇಲೆ ವಿಶ್ವಾಸ ಬಂದರೆ ಸಾಕು ಅದು ಕಚ್ಚುವ ಪ್ರಯತ್ನ ಮಾಡೋದಿಲ್ಲ. ಹೀಗೆಂದ ಮಾತ್ರಕ್ಕೆ ವಿದ್ಯಾರ್ಥಿಗಳು ಅಥವಾ ಹಾವಿನ ಬಗ್ಗೆ ತಿಳುವಳಿಕೆ ಇಲ್ಲದವರು ಹಾವನ್ನು ಹಿಡಿಯುವ ಯತ್ನ ಮಾಡಬಾರದು. ಎಂತಹ ಹಾವು ಹಿಡಿಯುವವನಿಗೂ ಆ ಸಂದರ್ಭದಲ್ಲಿ ಹೃದಯ ಬಡಿತ ಜಾಸ್ತಿಯಾಗಿರುತ್ತದೆ. ಆದರೆ, ಆತನ ಅನುಭವದಿಂದ ಹಾವನ್ನು ಸರಳವಾಗಿ ಹಿಡಿಯುತ್ತಾನೆ. ಕೆಲವೊಮ್ಮೆ ಹಾವು ಹಿಡಿಯುವವರು ಹಾವಿನಿಂದಲೇ ಮೃತರಾಗಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು ಎಂದು ಕಲ್ಲೂರ ಹೇಳಿದರು.
ಧಾರವಾಡ ಸುತ್ತಮುತ್ತಲು 18 ಜಾತಿ ವಿವಿಧ ಹಾವುಗಳಿವೆ. ಈ ಪೈಕಿ ಮೂರು ಅಥವಾ ನಾಲ್ಕು ಜಾತಿಯ ಹಾವುಗಳ ವಿಷ (ನಾಗರ ಹಾವು, ರಸಲ್ ವೈಫರ್, ಕೊಳಕ ಮಂಡಳ) ಮನುಷ್ಯನಿಗೆ ಸಾವು ತರಬಹುದು ಎಂದರು.
ಕೈಯಲ್ಲಿ ಗರುಡ ರೇಖೆ ಇದ್ದವರಿಗೆ ಹಾವು ಕಚ್ಚುವುದಿಲ್ಲವೇ ಐದು ಹೆಡೆ ಹಾವು ಇದ್ದಾವೆಯೇ ಹಾವುಗಳು ನಿಧಿಯನ್ನು ಕಾಯುತ್ತವೆ ನಿಜವಾ ಈ ರೀತಿಯಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಕಲ್ಲೂರು ಅವರು ಇದೆಲ್ಲಾ ಮೂಢನಂಬಿಕೆ ಅಷ್ಟೆ ಎಂದು ಉತ್ತರಿಸಿದರು.
ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ ಮಾತನಾಡಿ, ಅನಾದಿ ಕಾಲದಿಂದಲೂ ಭಾರತೀಯರು ಹಾವುಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಆದರೆ, ಅವುಗಳ ಬಗ್ಗೆ ಆಳವಾದ ಅಧ್ಯಯನ ಆಗಿಲ್ಲ. ಮೂಡ ನಂಬಿಕೆಗಳಿಗೆ ಬಲಿಯಾಗಿ ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥ್ಥಿಗಳಿಗೆ ಹಾವುಗಳ ಪ್ರಭೇಧ, ಕಡಿದಾಗ ವಹಿಸುವ ಪ್ರಥಮ ಚಿಕಿತ್ಸೆ ಬಗ್ಗೆ ತಿಳುವಳಿಕೆ ನೀಡುವ ಅಗತ್ಯತೆ ಇದೆ ಎಂದರು.
ಪ್ರಾಚಾರ್ಯ ಡಾ.ಅಜಿತ ಪ್ರಸಾದ ಮಾತನಾಡಿ, ಪರಿಸರ ಸಮತೋಲನದಲ್ಲಿ ಪ್ರಾಣಿಗಳ ಪಾತ್ರವು ಮಹತ್ವದ್ದಾಗಿದ್ದು, ಅವುಗಳಿಗೂ ಬದುಕುವ ಹಕ್ಕಿದೆ. ಮಾನವರಾದ ನಾವು ಆ ಹಕ್ಕನ್ನು ಕಸಿದುಕೊಳ್ಳಬಾರದು. ಹಾವುಗಳ ಸಂತತಿ ಕ್ಷೀಣಿಸುತ್ತಿರುವ ಈ ಸಂದರ್ಭ ಅವುಗಳ ಬಗ್ಗೆ ಮಾಹಿತಿ ಅತಿ ಅವಶ್ಯ. ಹಾವು ತಾನಾಗಿಯೇ ಯಾರ ಮೇಲೂ ದಾಳಿ ಮಾಡುವುದಿಲ್ಲ. ಅದಕ್ಕೆ ಅಪಾಯವಾದಾಗ ಮಾತ್ರ ಅದು ಪ್ರತಿ ದಾಳಿ ಮಾಡುತ್ತದೆ. ಹಾವು ಅಪಾಯಕಾರಿ ಪ್ರಾಣಿ ಎಂಬ ಕಲ್ಪನೆ ತಪ್ಪು ಎಂದು ಅಭಿಪ್ರಾಯಿಸಿದರು. ಹಾವುಗಳನ್ನು ಹಿಡಿಯುವ ಶಿವಕುಮಾರ ಪಾಟೀಲ, ಸುರೇಶ ಹೆಗ್ಗೆರಿ, ಎಲ್ಲಪ್ಪಾ ಜೋಡಳ್ಳಿ ವಿವಿಧ ಪ್ರಭೇದದ ಹಾವುಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.  ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು, ಆರ್.ಬಿ. ತಿಮ್ಮಾಪೂರ ಇದ್ದರು. ಮಹಾವೀರ ಉಪಾಧ್ಯೆ ನಿರೂಪಿಸಿದರು. ಗ್ರೀನ್ ಆರ್ಮಿ ಸಂಸ್ಥೆಯ ಪ್ರಕಾಶ ಗೌಡರ ಸ್ವಾಗತಿಸಿದರು. ನಿಖಿತಾ ಹಿರೇಮಠ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement