ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಸಕ್ತ ವರ್ಷದಿಂದ ಕಬ್ಬಿಣಾಂಶದ ಮಾತ್ರೆ ವಿತರಣೆ

Lingaraj Badiger
Updated On : 18 Jul 2013, 11:55 am

ಧಾರವಾಡ: ಹದಿಹರೆಯದ (10-19) ವಯಸ್ಸಿನವರಲ್ಲಿ ಕಂಡು ಬರುವ ರಕ್ತಹೀನತೆ ಪ್ರಮಾಣ ನಿಯಂತ್ರಿಸಲು ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಪ್ರಸಕ್ತ ವರ್ಷದಿಂದ ಕಬ್ಬಿಣಾಂಶ ಹಾಗೂ ಜುಂತುನಾಶಕ ಮಾತ್ರೆಗಳ ವಿತರಣೆಯ ನೂತನ ಯೋಜನೆ ಜಾರಿಯಾಗಿದೆ.
ವಾರಕ್ಕೊಂದರಂತೆ ತೆಗೆದುಕೊಳ್ಳುವ ಕಬ್ಬಿಣಾಂಶದ ಮಾತ್ರೆಗಳನ್ನು 6ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ ಹದಿಹರೆಯದ ಹೆಣ್ಣು ಮಕ್ಕಳಿಗೆ ನೀಡಲು ತೀರ್ಮಾನಿಸಿದ್ದು, ಈ ಮಾತ್ರೆಗಳನ್ನು ನಿರ್ದಿಷ್ಟ ದಿನದಂದು ಅಂದರೆ, ಪ್ರತಿ ಸೋಮವಾರಕ್ಕೊಮ್ಮೆ ರಾಜ್ಯದ ಎಲ್ಲ ಶಾಲೆಗಳ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಮಾತ್ರೆಗಳ ವಿತರಣೆ ನಡೆಯಲಿದೆ.
ರಕ್ತಹೀನತೆ: ರಾಜ್ಯಾದ್ಯಂತ ಬುಧವಾರದಿಂದಲೇ ಆರಂಭವಾದ ಈ ಯೋಜನೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಎಂ. ಅಂಗಡಿ ಕನ್ನಡಪ್ರಭಕ್ಕೆ ಹೆಚ್ಚಿನ ಮಾಹಿತಿ ನೀಡಿದರು. ಹದಿಹರೆಯದ ಜೀವನದಲ್ಲಿ ದೈಹಿಕ, ಮಾನಸಿಕ ಬದಲಾವಣೆಗಳು ಹಾರ್ಮೋನ್‌ಗಳ ಬದಲಾವಣೆಯಿಂದ ಆಗುತ್ತವೆ. ಈ ವಯಸ್ಸಿನಲ್ಲಿ ಪೌಷ್ಟಿಕಾಂಶದ ಆವಶ್ಯಕತೆ ಇದ್ದು, ಅದರಲ್ಲೂ ಕಬ್ಬಿಣಾಂಶ ದೇಹದ ಬೆಳವಣಿಗೆಯಲ್ಲಿ ಅತಿ ಮಹತ್ವದ್ದು. ರಕ್ತಹೀನತೆ ಗರ್ಭಿಣಿಯರು, ಮಕ್ಕಳಲ್ಲಿ ಮಾತ್ರವಲ್ಲದೇ, ಹದಿಹರೆಯದವರಲ್ಲೂ ಬಹಳಷ್ಟು ಕಾಣುತ್ತದೆ. ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ರಕ್ತಹೀನತೆ ಆಗುತ್ತದೆ ಎಂದರು.
ಒಟ್ಟು ಹದಿಹರೆಯದವರಲ್ಲಿ ಶೇ. 55ಕ್ಕಿಂತ ಹೆಚ್ಚು ಗಂಡು ಮತ್ತು ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಈ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ. ಹೆಚ್ಚು ಋತುಸ್ರಾವದಿಂದ ರಕ್ತಹೀನತೆ ಕಾಣುತ್ತದೆ. ಇದರಿಂದ ಪೌಷ್ಟಿಕಾಂಶ ವಿಶೇಷವಾಗಿ ಕಬ್ಬಿಣಾಂಶ ಕೊರತೆಯಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಸಿವು ಆಗದಿರುವುದು, ಋತುಚಕ್ರ ಸರಿಯಾಗಿ ಆಗದೇ ತೊಂದರೆ ಪಡಬೇಕಾಗುತ್ತದೆ. ಆದ್ದರಿಂದ ಪ್ರಸ್ತುತ ನೂತನ ಯೋಜನೆ ಜಾರಿಗೆ ಬಂದಿದ್ದು, ವಾರಕ್ಕೊಂದರಂತೆ ಕಬ್ಬಿಣಾಂಶದ ಮಾತ್ರೆ ಕೊಡಲಾಗುವುದು. ಪ್ರತಿ ಮಾತ್ರೆ 100 ಎಂ.ಜಿ. ಕಬ್ಬಿಣ ಹಾಗೂ 500 ಯುಜಿ ಫೋಲಿಕ್ ಆಸಿಡ್ ಹೊಂದಿದ್ದು, 52 ವಾರ ಸೇವಿಸಬೇಕು. ವರ್ಷಕ್ಕೆ ಎರಡು ಸಲ ಜಂತುನಾಶಕ ಮಾತ್ರೆಗಳನ್ನು ವಿತರಿಸಲಾಗುತ್ತದೆ. ಸಮತೋಲನ ಹಾಗೂ ಪೌಷ್ಟಿಕ ಆಹಾರ ಸೇವೆ ಹಾಗೂ ಮಾತ್ರೆಗಳ ಸೇವನೆಗಾಗಿ ಆಪ್ತಸಲಹೆ ಮತ್ತು ಸಮಾಲೋಚನೆ ಆರೋಗ್ಯ ಇಲಾಖೆಯಿಂದ ನಡೆಸಲಾಗುವುದು ಎಂದು ಮಾಹಿತಿ ಒದಗಿಸಿದರು.
ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು
ಜಿಲ್ಲೆಯ ಒಟ್ಟು 1,538 ಶಾಲೆಗಳ ಒಟ್ಟು ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೇಕಾದ ಮಾತ್ರೆಗಳು ಈಗಾಗಲೇ ಪೂರೈಕೆಯಾಗಿದ್ದು, ಈ ಮಾತ್ರೆಗಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತಿದ್ದು ಇಲಾಖೆ ಬಿಇಓ, ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಪ್ರತಿ ಸೋಮವಾರ ಊಟದ ನಂತರ ಒಂದು ಮಾತ್ರೆ ನೀಡಲು ಆದೇಶಿಸಲಾಗಿದೆ. ಈ ಯೋಜನೆ ಯಶಸ್ವಿಗೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರ ಪಾತ್ರ ತುಂಬಾ ಇದೆ. ರಕ್ತ ಹೀನತೆ ಹಂತ ಅಥವಾ ತೀವ್ರತೆ ಅರಿಯಲು ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಉಗರು, ನಾಲಿಗೆ, ತುಟಿ, ಕಣ್ಣು ನೋಡಿ ಗುರುತಿಸಬಹುದು. ಇದಕ್ಕಾಗಿ ಇವರಿಗೆ ತರಬೇತಿ ಸಹ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ ಪತ್ರಿಕೆಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement