ಮಕ್ಕಳು ಆರೋಗ್ಯವಂತರಾಗಿದ್ದರೆ ದೇಶಕ್ಕೆ ಆಸ್ತಿ
ಧಾರವಾಡ: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಕಬ್ಬಿಣಾಂಶ ಹಾಗೂ ಜಂತುನಾಶಕ ಮಾತ್ರೆಗಳ ವಿತರಣೆ ಕಾರ್ಯಕ್ರಮ ಬುಧವಾರ ನಗರದ ಬಾಸೆಲ್ ಮಿಶನ್ ಗಂಡು ಮಕ್ಕಳ ಶಾಲೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಸಮೀರ ಶುಕ್ಲ ಸಮಾರಂಭ ಉದ್ಘಾಟಿಸಿ ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಆಸ್ತಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪೌಷ್ಟಿಕಾಂಶ ಹಾಗೂ ಕಬ್ಬಿಣಾಂಶ ಕಡಿಮೆ ಇರುವ ಮಕ್ಕಳಿಗೆ ಈ ಯೋಜನೆ ಮೂಲಕ ಅವರನ್ನು ಬಲಿಷ್ಠರನ್ನಾಗಿ ಮಾಡಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಸಹಕಾರ ನೀಡುವ ಮೂಲಕ ಯೋಜನೆ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ, ಕುಪೋಷಣೆ ಇಡೀ ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಜಾರಿಗೆ ಬಂದ ಈ ನೂತನ ಯೋಜನೆಗೆ ಜಿಪಂ ವತಿಯಿಂದ ಹೆಚ್ಚಿನ ವೈದ್ಯರನ್ನು ಹಾಗೂ ವಾಹನಗಳನ್ನು ನೀಡಲಾಗಿದೆ. ಬರೀ ಮಾತ್ರೆಗಳನ್ನು ನುಂಗಿಸುವುದು ಮಾತ್ರವಲ್ಲದೇ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಲಾಗುವುದು. ಈ ಯೋಜನೆಗೆ ಸಾರ್ವಜನಿಕರು ಹಾಗೂ ಪಾಲಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರತ್ನವ್ವ ಕಳ್ಳಿಮನಿ ಮಾತನಾಡಿದರು. ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಆರೋಗ್ಯ ಇಲಾಖೆ ಡಾ.ಎನ್.ಎಂ. ಅಂಗಡಿ, ಡಾ. ಹೊನಕೇರಿ, ಡಿಡಿಪಿಐ ಡಾ.ಬಿ.ಕೆ.ಎಸ್. ವರ್ಧನ್, ಶಿಕ್ಷಣಾಧಿಕಾರಿ ಗಿರೀಶ ಪದಕಿ, ಬಾಸೆಲ್ ಮಿಶನ್ ಸಂಸ್ಥೆಯ ಜೆ.ಎಸ್. ಕುರಿ, ಶಾಲೆಯ ಪ್ರಾಚಾರ್ಯೆ ಸುಮಂಗಲಾ ಕುರಿ, ಎ.ಎಂ. ಶೇಖ್ ಇದ್ದರು.