ಆಸ್ತಿ ವಿವಾದ: ತಂಬೂರು ಗ್ರಾಮದ ವೃದ್ಧೆ ಧರಣಿ
ಕಲಘಟಗಿ: ದಶಕಗಳಿಂದಲೂ ವಾಸವಾಗಿರುವ ಮನೆಯ ಹೆಸರನ್ನು ಗ್ರಾಪಂನಲ್ಲಿ ದಾಖಲಿಸಬೇಕೆಂದು ತಾಲೂಕಿನ ತಂಬೂರ ಗ್ರಾಮದ 85 ವರ್ಷದ ವೃದ್ಧೆ ಇಮಾಮ್‌ಬೀ ದಾವಲಸಾಬ್ ಮುಲ್ಲಾ ತಹಸೀಲ್ದಾರ್ ಕಚೇರಿ ಮುಂದೆ ತನ್ನ ಕುಟುಂಬದವರೊಂದಿಗೆ ಧರಣಿ ಕುಳಿತಿದ್ದಾಳೆ.
ತಂಬೂರ ಗ್ರಾಪಂ ವಾರ್ಡ್ ನಂ. 1, ಆಸ್ತಿ ನಂ. 4ರಲ್ಲಿ ಇರುವ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ದಶಕಗಳಿಂದಲೂ ವಾಸವಾಗಿರುವ ಕುರಿತು ಗ್ರಾಪಂನಲ್ಲಿ ದಾಖಲೆಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಪಂ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ತೆರವುಗೊಳಿಸಿದ್ದರ ಕುರಿತು ನಾನು ನ್ಯಾಯಾಲಯದ ಮೊರೆ ಹೋಗಿದ್ದೆ. 2009ರಲ್ಲಿ ನ್ಯಾಯಾಲಯವು ದಾಖಲು ಮಾಡುವಂತೆ ಗ್ರಾಪಂಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ನನ್ನ ಕುಟುಂಬದೊಂದಿಗೆ ಧರಣಿ ಕುಳಿತಿದ್ದೇನೆ ಎಂದು ಇಮಾಮ್‌ಬೀ ತಿಳಿಸಿದರು.
ಈ ಕುರಿತು ತಹಸೀಲ್ದಾರ್ ಕೆ.ಆರ್. ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಸ್.ಆರ್. ವೀರಕರ ಅವರನ್ನು ಸಂಪರ್ಕಿಸಿದಾಗ, ಧರಣಿ ಕುಳಿತಿರುವ ವೃದ್ಧೆಯ ಬಳಿ ಮನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲಾತಿಗಳಿಲ್ಲ. ಗ್ರಾಪಂ ಕಚೇರಿಯ ಪೂರ್ಣ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು.