ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ವಿಘ್ನ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 18
ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನೊಳಗೊಂಡ ಕ್ರೀಡಾ ಸಮುಚ್ಚಯ ನಿರ್ಮಿಸುವ ಯೋಜನೆಗೆ ಪ್ರಾರಂಭದಲ್ಲಿಯೇ ವಿಘ್ನ ಎದುರಾಗಿದೆ.
ಧಾರವಾಡದಿಂದ ಸುಮಾರು 8 ಕಿ.ಮೀ. ದೂರದ ತಡಸಿನಕೊಪ್ಪ ಗ್ರಾಮದ ಬಳಿ ಇರುವ ಸರ್ಕಾರಕ್ಕೆ ಸೇರಿದ 61 ಎಕರೆ 6 ಗುಂಟೆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾ ಸಮುಚ್ಚಯ ನಿರ್ಮಿಸಬೇಕೆಂಬ ಯೋಜನೆಗೆ ಇದೀಗ ಪೂರ್ಣ ಪ್ರಮಾಣದಲ್ಲಿ ಕತ್ತರಿ ಬೀಳುವ ಆತಂಕ ಎದುರಾಗಿದೆ. ಮುಖ್ಯ ರಸ್ತೆಯಿಂದ ಸಾಕಷ್ಟು ಒಳಗಡೆ ಯೋಜನೆಗೆ ನಿಗದಿಪಡಿಸಿದ ಜಾಗ ಇರುವ ಒಂದೇ ಕಾರಣದಿಂದ ಯೋಜನೆಗೆ ಪೂರ್ಣ ವಿರಾಮ ಇಡುವ ಯತ್ನಗಳು ತೆರೆಮರೆಯಲ್ಲಿ ನಡೆದಿವೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದರ್ಪಣ ಜೈನ್ ಅವರು 16-9-2011ರಂದು ತಡಸಿನಕೊಪ್ಪ ಬಳಿ ಇರುವ ಜಾಗೆ (ಸರ್ವೇ ನಂ. 110) ಪರಿಶೀಲಿಸಿ, ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ಬೆಂಗಳೂರಿನ ಐಡೆಕ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚೆಯನ್ನೂ ನಡೆಸಿದ್ದರು. ಧಾರವಾಡ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನವರು ಈ ಜಾಗದಲ್ಲಿ ಸರ್ವೇ ಕಾರ್ಯ ನಡೆಸಿ, ಕ್ರೀಡಾ ಸಮುಚ್ಚಯದ ನೀಲ ನಕಾಶೆಯನ್ನೂ ತಯಾರಿಸಿದ್ದರು. ಜಿಲ್ಲಾ ಕ್ರೀಡಾಂಗಣ ಇಲಾಖೆಯಿಂದ ಯೋಜನೆ ಅನುಷ್ಠಾನಕ್ಕಾಗಿ ರು. 5 ಲಕ್ಷಗಳನ್ನು ನೀಡಲಾಗಿದ್ದು, ಈ ಹಣದಲ್ಲಿ ನಿಯೋಜಿತ ಜಾಗದಲ್ಲಿ ಸ್ವಚ್ಛತಾ ಕಾರ್ಯವನ್ನೂ ಮಾಡಲಾಗಿದೆ. ಇದೀಗ ಜಿಲ್ಲಾಡಳಿತ ತಡಸಿನಕೊಪ್ಪ ಬಳಿಯ ಕ್ರೀಡಾ ಸಮುಚ್ಚಯದ ನಿಯೋಜಿತ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲು ಹೊರಟಿದೆ ಎಂಬ ಮಾತುಗಳು ಕ್ರೀಡಾ ಪ್ರೇಮಿಗಳಿಂದ ಕೇಳಿಬರುತ್ತಿವೆ.
ಸೌಲಭ್ಯಗಳೇನು?: ಈ ಕ್ರೀಡಾ ಸಮುಚ್ಚಯದಲ್ಲಿ ಹೊಸ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಬಗ್ಗೆ ವಿಶೇಷ ಯೋಜನೆ ರೂಪಿಸಲಾಗಿದೆ. ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲು ಬೇಕಾದ ಅನುಕೂಲತೆಗಳು, ತರಬೇತುದಾರರ ವಸತಿ ಗೃಹ, ಕ್ರೀಡಾಳುಗಳಿಗೆ ಬೇಕಾದ ಔಷಧಿ ಒದಗಿಸುವ ಮಳಿಗೆ, ಸೂಪರ್ ಸ್ಪೇಷಾಲಿಟಿ ಕ್ರೀಡಾ ಚಿಕಿತ್ಸಾಲಯ, ವಿವಿಧ ಕ್ರೀಡಾ ಸಾಮಗ್ರಿಗಳು, ಆಡಿಟೋರಿಯಂ, ಕ್ರೀಡಾ ಪುಸ್ತಕಗಳು, ಗ್ರಂಥಾಲಯ, ಈಜುಗೊಳ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಲು ಬೇಕಾದ ಸೌಲಭ್ಯ, ವಸತಿ ನಿಲಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಈ ಕ್ರೀಡಾ ಸಮುಚ್ಚಯದಲ್ಲಿ ಒದಗಿಸಲು ಯೋಜನೆ ರೂಪಿಸಲಾಗಿದೆ. ಸಿಂಥೆಟಿಕ್ ಟ್ರ್ಯಾಕ್, ವಾಲಿಬಾಲ್, ನೆಟ್‌ಬಾಲ್, ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್, ಫುಟ್‌ಬಾಲ್, ಟೇಬಲ್ ಟೆನ್ನಿಸ್, ಜೂಡೋ ಮತ್ತಿತರ ಕ್ರೀಡೆಗಳಿಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಉದ್ದೇಶವೂ ಈ ಯೋಜನೆಯಲ್ಲಿದೆ.
ಬೆಂಗಳೂರಿಗಿಂತಲೂ ದೊಡ್ಡದು: ಈ ರೀತಿಯ ಅನುಕೂಲತೆಗಳು ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತಗೊಂಡಿವೆ. ಧಾರವಾಡದಲ್ಲಿ ಈ ಸೌಲಭ್ಯಗಳನ್ನು ಒದಗಿಸಿದಲ್ಲಿ ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗುತ್ತದೆ.
ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ನಿಯೋಜಿತ ಈ 61 ಎಕರೆ 6 ಗುಂಟೆ ಜಾಗದಲ್ಲಿ ಸ್ವಚ್ಛತಾ ಕಾರ್ಯವೊಂದೇ ನಡೆದಿದೆ. ಯೋಜನೆ ನಿರ್ಮಾಣಕ್ಕೆ ತಗುಲುವ ವೆಚ್ಚ, ಯೋಜನೆಯ ರೂಪುರೇಷೆಗಳ ಕುರಿತು ಇನ್ನಾವುದೇ ಕಾರ್ಯಗಳು ನಡೆದಿಲ್ಲ. ರಾಜ್ಯ ಸರ್ಕಾರವೂ ಇತ್ತೀಚೆಗೆ ಮಂಡಿಸಿದ್ದ ಬಜೆಟ್‌ನಲ್ಲಿ ಈ ಯೋಜನೆಗೆ ಯಾವುದೇ ರೀತಿಯ ಆರ್ಥಿಕ ನೆರವು ಮೀಸಲಿಡಲಿಲ್ಲ. ಇದಲ್ಲದೇ ಬೆಂಗಳೂರಿನಲ್ಲಿ ಇಂತಹ ಕ್ರೀಡಾ ಸಮುಚ್ಚಯ ಕೇವಲ 30 ಎಕರೆ ಪ್ರದೇಶದಲ್ಲಿದೆ. ಆದರೆ ಧಾರವಾಡದಲ್ಲಿ ನಿರ್ಮಿಸಿದರೆ ಬೆಂಗಳೂರಿನ ಸಮುಚ್ಚಯಕ್ಕಿಂತ ದೊಡ್ಡದಾಗಲಿದೆ.
ಈ ಮಧ್ಯೆ ಉದ್ದೇಶಿಕ ಈ ಕ್ರೀಡಾ ಸಮುಚ್ಚಯವನ್ನು ತಡಸಿನಕೊಪ್ಪದ ಬಳಿ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕ್ರೀಡಾ ಸಮುಚ್ಚಯದ ಯೋಜನೆ ಕೈಬಿಡುವುದರಿಂದ ಉತ್ತರ ಕರ್ನಾಟಕದ ಕ್ರೀಡಾಪ್ರೇಮಿಗಳಿಗೆ ಅನ್ಯಾಯವಾಗುವುದು ಖಚಿತ.
ತಡಸಿನಕೊಪ್ಪದಲ್ಲಿ ಕ್ರೀಡಾ ಸಮುಚ್ಚಯವಾಗದಿದ್ದರೆ ಕ್ರೀಡಾಪ್ರೇಮಿಗಳೆಲ್ಲ ಸೇರಿ ಬೀದಿಗಳಿದು ಹೋರಾಟ ಮಾಡುತ್ತೇವೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಹಿಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್ ಅವರು ಒಂದು ಬಾರಿ ಸಭೆಯನ್ನೂ ನಡೆಸಿದ್ದಾರೆ. ಇದೀಗ ಈ ಜಾಗದಲ್ಲಿ ಆಶ್ರಯ ಮನೆ ನಿರ್ಮಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆಶ್ರಯ ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಬೇರೊಂದು ಜಾಗ ಹುಡುಕಿಕೊಳ್ಳಲಿ.
- ಶಿವು ಹಿರೇಮಠ
ಕ್ರೀಡಾಪಟು, ಹು-ಧಾ ಪಾಲಿಕೆ ಸದಸ್ಯ
- ಆನಂದ ಅಂಗಡಿ