ಧಾರವಾಡ: ಮತ್ತೆ ಸರಣಿ ಕಳ್ಳತನ
ಧಾರವಾಡ: ನಗರದಲ್ಲಿ ಸರಣಿ ಕಳ್ಳತನ ಮುಂದುವರೆದಿದ್ದು ಬುಧವಾರ ರಾತ್ರಿ ಮತ್ತೇ ಮನೆಯೊಂದರಲ್ಲಿ ಕಳ್ಳತನವಾಗಿದ್ದು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ಹಾಗೂ ನಗದು ದೋಚಲಾಗಿದೆ.
ಉಪನಗರ ಠಾಣೆ ವ್ಯಾಪ್ತಿಯ ಕೊಪ್ಪದಕೇರಿಯ ಮಹಾಂತ ಬಸವೇಶ್ವರ ನಗರದ ವ್ಯಾಪಾರಸ್ಥ ಶಿವಯೋಗಿ ಮುರಿಗೆಪ್ಪ ಕೋರಿ ಎಂಬುವರ ಮನೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.
ಸಮೀಪದ ರಾಣಿಚೆನ್ನಮ್ಮ ನಗರದ ಅಣ್ಣ ಹಾಗೂ ಕುಟುಂಬದವರು ವಿದೇಶಿ ಪ್ರವಾಸಕ್ಕೆಂದು ಹೋದ ಹಿನ್ನೆಲೆಯಲ್ಲಿ ಅಣ್ಣನ ಮನೆ ಕಾಯಲು ಕುಟುಂಬ ಸಮೇತ ಹೋದ ಶಿವಯೋಗಿ ಕೋರಿ ಎಂಬುವರ ಮನೆಯನ್ನೇ ಕಳ್ಳರು ದೋಚಿದ್ದಾರೆ. ಅಲ್ಮೇರಾ ಮುರಿದು 10 ತೊಲೆ ಬಂಗಾರ, 260 ಗ್ರಾಮ ಬೆಳ್ಳಿ ಹಾಗೂ 25 ಸಾವಿರ ನಗದು ಕಳುವಾಗಿದೆ ಎಂದು ಪ್ರಕರಣ ದಾಖಲಿಸಿದ ಉಪನಗರ ಠಾಣೆ ಪೊಲೀಸರು ತಿಳಿಸಿದರು. ಅಲ್ಲದೆ, ಮರಾಠಾ ಕಾಲನಿಯಲ್ಲಿಯೂ ಎರಡು ಮನೆಗಳ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಶಹರ ಠಾಣಾ ವ್ಯಾಪ್ತಿಯ ಸವದತ್ತಿ ರಸ್ತೆಯಲ್ಲಿನ ತಡಕೋಡ ಮತ್ತು ಠಾಕೂರ ಎಂಬುವರ ಫಾರ್ಮ್ ಹೌಸ್‌ಗಳಲ್ಲಿ ಕಳ್ಳತನದ ಯತ್ನ ನಡೆದಿದ್ದು, ಒಂದು ಫಾರ್ಮ್‌ನಲ್ಲಿನ ನಾಯಿಯೊಂದು ಕಳ್ಳರ ಏಟಿಗೆ ಸಾವನ್ನಪ್ಪಿದೆ. ಈ ಕುರಿತು ಶಹರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂರು ಕಡೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗಳವಾರ ರಾತ್ರಿಯಷ್ಟೇ ನಗರದ ಮೂರು ಕಡೆ ಸರಣಿ ಕಳ್ಳತನವಾಗಿತ್ತು. ಎಲ್ಲ ಕಳ್ಳತನಗಳು ಬಾಗಿಲು ಮುರಿದೇ ಮಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.