ಪರಿಸರ ಸ್ನೇಹಿ ಗಣಪ: ಕಲಾವಿದರಿಗೆ ತರಬೇತಿ
ಧಾರವಾಡ: ಗಣೇಶ-ಗೌರಿ ಮೂರ್ತಿಗಳನ್ನು ನಿರ್ಮಿಸುವ ಕಲಾವಿದರಿಗಾಗಿ ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ಮಿಸುವ ಕುರಿತ ಒಂದು ದಿನದ ಕಾರ್ಯಾಗಾರವನ್ನು ಜುಲೈ 21ರ ಬೆಳಗ್ಗೆ 10.30ಕ್ಕೆ ಪರಿಸರ ಭವನದಲ್ಲಿ ಏರ್ಪಡಿಸಲಾಗಿದೆ. ಗಣೇಶ-ಗೌರಿ ಹಬ್ಬದ ಸಂದರ್ಭದಲ್ಲಿ ನಿರ್ಮಿಸಲಾಗುವ ವಿಗ್ರಹಗಳು ವಿಷಪೂರಿತ ಬಣ್ಣಗಳನ್ನು ಹೊಂದಿರುತ್ತವೆ. ಇವುಗಳು ನೋಡಲು ಬಹು ಆಕರ್ಷಕವಾಗಿರುತ್ತವೆ. ಆದರೆ ನೀರಿನಲ್ಲಿ ವಿಸರ್ಜಿಸಿದಾಗ ಹಾನಿಕಾರಕ ಅಂಶಗಳು ನೀರಿಗೆ ಸೇರಿ ಮನುಷ್ಯರೂ ಸೇರಿದಂತೆ ಎಲ್ಲ ಬಗೆಯ ಜೀವಿಗಳಿಗೆ ಅಪಾರ ಪ್ರಮಾಣದಲ್ಲಿ ಕೆಡಕುಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ನಿರ್ಮಿಸುವಲ್ಲಿ ನುರಿತರಾದ ಕಲಾವಿದರುಗಳು ಮಾರ್ಗದರ್ಶನ ನೀಡಲಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕ್ರಿಯಾಶೀಲ ಗೆಳೆಯರ ಸಹಯೋಗದೊಂದಿಗೆ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ನಗರದ ಗಣೇಶೋತ್ಸವ ಮಂಡಳಿಯ ಪದಾಧಿಕಾರಿಗಳು, ಪರಿಸರ, ಆರೋಗ್ಯ ಹಾಗೂ ಜಲಮಂಡಳಿಯ ಹಿರಿಯ ಅಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ಕಾರ್ಯಾಗಾರವನ್ನು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಜಿಲ್ಲಾ ಪರಿಸರ ಅಧಿಕಾರಿ ವಿಜಯಕುಮಾರ ಕಡಕ್ಭಾವಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶಂಕರ ಕುಂಬಿ ಅಧ್ಯಕ್ಷತೆ ವಹಿಸುವರು. ಗಣೇಶ ವಿಗ್ರಹ ನಿರ್ಮಿಸುವ ಅವಳಿನಗರದ ಎಲ್ಲ ಕಲಾವಿದರು ಭಾಗವಹಿಸಲು ಪರಿಸರ ಸಮಿತಿ ಉಪಾಧ್ಯಕ್ಷ ಡಾ.ಎ.ಎಸ್. ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.