ಬಟಾಣಿ ಬೆಲೆ ನಿಗದಿಗೆ ರೈತರ, ದಲ್ಲಾಳಿಗಳ ಸಭೆ
ಧಾರವಾಡ: ರೈತರು ಬೆಳೆದ ಬಟಾಣಿ ಬೆಳೆಗೆ ದಲ್ಲಾಳಿಗಳು ಸೂಕ್ತ ಬೆಲೆ ನೀಡಬೇಕೆಂದು ರೈತ ಸಮುದಾಯ ಗುರುವಾರ ಮತ್ತೆ ಇಲ್ಲಿನ ಹಳೇ ಎಪಿಎಂಸಿ ಆವರಣದಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಿತು.
ಬಟಾಣಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರೈತರು ಪ್ರತಿಭಟನೆ ಮಾಡಿದ್ದು, ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆದ ದಲ್ಲಾಳಿ ಹಾಗೂ ರೈತರ ಸಭೆಯಲ್ಲಿ, ತಾವು ಕಷ್ಟಪಟ್ಟು ಬೆಳೆದು ತಂದ ಬಟಾಣಿ ತೂಕದ ಸಂದರ್ಭದಲ್ಲಿ ಕೆಲ ದಲ್ಲಾಳಿಗಳು ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಇಲೆಕ್ಟ್ರಾನಿಕ್ ತೂಕದ ತಂತ್ರಜ್ಞಾನವನ್ನು ಅಳಡಿಸಬೇಕು ಎಂದು ಆಗ್ರಹಿಸಿದರು. ಅಲ್ಲದೇ, ದಲ್ಲಾಳಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಟಾಣಿ ಬೆಳೆಗಳ ಬೆಲೆಯನ್ನು ನಿಗದಿಪಡಿಸುತ್ತಿದ್ದಾರೆ. ರೈತರು ತಾವು ಬೆಳೆದು ತಂದ ಬಟಾಣಿಗಳನ್ನು ಕಡಿಮೆ ಬೆಲೆ ಹೇಳಿದರೆ, ಬೇರೆ ಕಡೆ ಮಾರಾಟ ಮಾಡುತ್ತಾರೆಂದು ದಲ್ಲಾಳಿಗಳು ಬೆಲೆ ನಿಗದಿ ಮಾಡುವುದರಲ್ಲಿಯೂ ವಿಳಂಬ ಮಾಡುತ್ತಾರೆ. ಆದ್ದರಿಂದ ಬಟಾಣಿ ಬೆಳೆಗಳ ಬೆಲೆಯನ್ನು ಮಧ್ಯಾಹ್ನ 3ರಿಂದ 5ಗಂಟೆ ಒಳಗೆ ಬೆಲೆ ನಿಗದಿಪಡಿಸಬೇಕು. ಬೆಲೆ ಸಮ್ಮತಿ ಎನಿಸಿದರೆ ಅವರಿಗೆ ಮಾರುತ್ತೇವೆ. ಇಲ್ಲವಾದರೆ, ತಾವು ಮುಂದಿನ ಮಾರುಕಟ್ಟೆಗೆ ಹೋಗುತ್ತವೆ. ಆದ್ದರಿಂದ ಬೆಲೆಯನ್ನು ಮಧ್ಯಾಹ್ನವೇ ನಿಗದಿಪಡಿಸಬೇಕೆಂದು ರೈತರು ಪಟ್ಟು ಹಿಡಿದರು.
ಮೋಸದ ಉದ್ದೇಶ ಇಲ್ಲ: ರೈತರ ಮಾತುಗಳಿಗೆ ಉತ್ತರವಾಗಿ ದಲ್ಲಾಳಿಗಳ ಮುಖಂಡರು ಮಾತನಾಡಿ, ತಾವು ರೈತರಿಗೆ ಯಾವುದೇ ಮೋಸ ಮಾಡುವ ಉದ್ದೇಶ ಹೊಂದಿಲ್ಲ. ಕೆಲ ದಲ್ಲಾಳಿಗಳು ಕೆಲ ಸಂದರ್ಭದಲ್ಲಿ ರೈತರಿಗೆ ಅನ್ಯಾಯ ಮಾಡಿರಬಹುದು. ಇದೀಗ ಇಲೆಕ್ಟ್ರಾನಿಕ್ ತೂಕದ ತಂತ್ರಜ್ಞಾನ ಅಳವಡಿಸಲು ಪ್ರಸ್ತುತ ಆಗುವುದಿಲ್ಲ. ಅದರ ಬದಲು ರೈತರ ಎದುರೇ ತೂಕ ಮಾಡುತ್ತೇವೆ. ತಮ್ಮಿಂದ ಬಟಾಣಿ ಖರೀದಿಸುವವರ ಬೆಲೆ ಆಧಾರದ ಮೇಲೆ ತಾವು ಬೆಲೆ ನಿಗದಿಪಡಿಸುತ್ತೇವೆ ಹೊರತು ಅನಕೂಲಕ್ಕೆ ತಕ್ಕಂತೆ ಅಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೊದಲು ಬಟಾಣಿಗೆ ಪೂನಾ ಹಾಗೂ ಮುಂಬೈಯಲ್ಲಿ ಉತ್ತಮ ಬೆಲೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ತಾವು ರೈತರಿಗೆ ಉತ್ತಮ ಬೆಲೆಯನ್ನೆ ನೀಡಿದ್ದೇವೆ ಎಂದರು. ಎಪಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಹೊಸೂರ, ರೈತರಿಂದ ಯಾವುದೇ ತಾಕೀತು ಬರದಂತೆ ವ್ಯಾಪಾರ ಮುನ್ನಡೆಸಬೇಕು. ಮಧ್ಯಾಹ್ನ 2 ಅಥವಾ 3ರೊಳಗಾಗಿ ಬೆಲೆ ನಿಗದಿಪಡಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಪುಂಡಲೀಕ ಫೀರಗಾರ, ಅಪ್ಪಣ್ಣ ವಡ್ಡರ, ದಾದಾಸಾಬ ದೇಸಾಯಿ, ಶಿವಾಜಿ ಪೊಮೋಜಿ, ಮಲ್ಲಪ್ಪ ಮಾಲನವರ, ಹನುಮಂತಪ್ಪ ಗಿರಿಯಪ್ಪನವರ, ರಾಜು ನವಲೂರ ಇದ್ದರು.