ಶಿರೂರು: ಖಾತ್ರಿ ಸಾಮಾಜಿಕ ಪರಿಶೋಧನೆ
ಹುಬ್ಬಳ್ಳಿ: ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ 2012-13ನೇ ಸಾಲಿನ ಮೊದಲ ಸುತ್ತಿನ ಸಾಮಾಜಿಕ ಪರಿಶೋಧನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಕಾರ್ಯದರ್ಶಿ ಎಂ.ಕೆ. ಹೂಲಿ, ಅಕ್ಟೋಬರ್ 1, 2012ರಿಂದ ಮಾಚ್ 3, 2013ರ ವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ, ವೆಚ್ಚದ ಕುರಿತಂತೆ ವಿವರ ಒದಗಿಸಿದರು. ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರು ಮಾತನಾಡಿ, ಕಾಮಗಾರಿಗಳ ಪರಿಶೋಧನೆ ನಡೆಸಲಾಗಿದ್ದು, ಅಂತಿಮವಾಗಿ ಇಂದು ವರದಿ ಮಂಡಿಸಲಾಗಿದೆ ಎಂದರು. ಸಹಾಯಕ ತೋಟಗಾರಿಕೆ ಅಧಿಕಾರಿ ವೆಂಕಟೇಶ, ಅರಣ್ಯ ಇಲಾಖೆ ಬಿ.ವಿ. ಕುಂಬಾರ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು. ಮೇಲ್ವಿಚಾರಕಿ ಮಾಲಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ರುದ್ರವ್ವ ದೇವಣ್ಣವರ, ಉಪಾಧ್ಯಕ್ಷ ಪ್ರಕಾಶಗೌಡ ಬಾಳನಗೌಡ್ರ, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.
ಇಂದು ಕಾರ್ಯಾಗಾರ
ಧಾರವಾಡ: ಕೋಟ್ಪಾ (ಈಕಖಿಕಿಆ) ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಉತ್ತರ ವಲಯ ಪೊಲೀಸ್ ಅಧಿಕಾರಿಗಳಿಗೆ ಜು. 19ರಂದು ಬೆಳಗ್ಗೆ 10ಕ್ಕೆ ಜಿಪಂ ಸಭಾಂಗಣದಲ್ಲಿ (ಧಾರವಾಡ, ಗದಗ, ಹಾವೇರಿ ಜಿಲ್ಲೆ) ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ನಿಯಂತ್ರಣ ಯೋಜನೆ, ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯಾಗಾರ ಏರ್ಪಡಿಸಿವೆ ಎಂದು ಸಂಯೋಜಕ ಪ್ರವೀಣ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.