ಹುಬ್ಬಳ್ಳಿಯಲ್ಲಿ ನಾಪತ್ತೆಯಾದ ಬಾಲಕ ಕೇರಳದಲ್ಲಿ ಪತ್ತೆ
ಧಾರವಾಡ: ಹತ್ತು ತಿಂಗಳಿಂದ ನಾಪತ್ತೆಯಾಗಿದ್ದ ಬಾಲಕನೋರ್ವ ಮಕ್ಕಳ ಸಹಾಯವಾಣಿ-1098ನ ಪ್ರಯತ್ನದಿಂದ ಸುರಕ್ಷಿತವಾಗಿ ತಂದೆ-ತಾಯಿ ಮಡಿಲು ಸೇರಿದ ಮನಕಲಕುವ ಸುದ್ದಿ ಇದು.
ಅಂದು 2012 ಆಗಸ್ಟ್ 21. ಹುಬ್ಬಳ್ಳಿ ಗೋಕುಲ ರಸ್ತೆ ಬಳಿಯ ಆರ್.ಎಂ. ಲೋಹಿಯಾ ನಗರದ ನಿವಾಸಿ ಶಂಕ್ರಪ್ಪ ಅಗಡಿ ಅವರ ಹದಿನೇಳು ವರ್ಷ ವಯಸ್ಸಿನ ಪುತ್ರ ವಿನಾಯಕ ಅಗಡಿ, ಕುಟುಂಬದ ಬಡತನದ ಕಾರಣ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದವ ನಾಪತ್ತೆಯಾಗಿದ್ದ. ತಂದೆ-ತಾಯಿಗೆ ಇದ್ದ ಒಂದೇ ಗಂಡು ಮಗನು ಎಲ್ಲಿ ಹೋದನೆಂದು ಕಳವಳಗೊಂಡು ಇಡೀ ಹುಬ್ಬಳ್ಳಿ ಹುಡುಕಾಡಿದ್ದರು. ಆದರೆ, ವಿನಾಯಕ ಮಾತ್ರ ಸಿಗಲಿಲ್ಲ. ಕೊನೆಗೆ ಬೇಸತ್ತು ಆಗಸ್ಟ್ 29ರಂದು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆದರೆ, ಪೊಲೀಸರಿಗೆ ಸಿಗದ ವಿನಾಯಕನು ಮಕ್ಕಳ ಸಹಾಯವಾಣಿಯ ಮೂಲಕ ಹತ್ತು ತಿಂಗಳ ನಂತರ ಪತ್ತೆಯಾಗಿದ್ದಾನೆ. ಅಷ್ಟೇ, ಅಲ್ಲ ತಂದೆ-ತಾಯಿಗೆ ಆ ಮಗುವನ್ನು ಶುಕ್ರವಾರ ಒಪ್ಪಿಸಿಯೂ ಆಯಿತು.
ಮಗ ಸಿಕ್ಕ ಸಂತೋಷದಲ್ಲಿ ತಂದೆ ಶಂಕರಪ್ಪ ಹಾಗೂ ತಾಯಿ ಲಕ್ಷ್ಮಿಯ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದವು. ಅದೆಷ್ಟು ಬಾರಿ ಮಗನನ್ನು ಅಪ್ಪಿ ಮುತ್ತು ಕೊಟ್ಟಿದ್ದಾಯಿತು. ಅಲ್ಲದೇ, ಮಗನನ್ನು ಹುಡುಕಿದ ಸಹಾಯವಾಣಿ ಸದಸ್ಯರಿಗೆ ಅಭಿನಂದನೆಯ ಸುರಿಮಳೆ ಸುರಿದರು ವಿನಾಯಕನ ತಂದೆ ತಾಯಿ.
ಎಲ್ಲಿದ್ದ ವಿನಾಯಕ: ಹುಬ್ಬಳ್ಳಿಯಲ್ಲಿ ಕುಟುಂಬದಿಂದ ದೂರವಾಗಿದ್ದ ವಿನಾಯಕ ಕೇರಳದ ಕೊಚ್ಚಿಯಲ್ಲಿ ಕಳೆದ ಹತ್ತು ತಿಂಗಳಿಂದ ಅಲ್ಲಿಯೇ ಉಳಿದಿದ್ದನು. ಆತನಿಗೆ ಊರಿಗೆ ಬರುವ ದಾರಿಯೇ ತಿಳಿಯದಂತಾಗಿ ಅಲ್ಲಿನ ಶೋರೂಂ ಒಂದರಲ್ಲಿ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸಿದ್ದನು. ಆಕಸ್ಮಿಕವಾಗಿ ದೊರೆತ ಕೇರಳದ ಮಕ್ಕಳ ಸಹಾಯವಾಣಿಗೆ ವಿನಾಯಕ ಕಳೆದ ಜೂನ್ 24ರಂದು ಸಂಪರ್ಕಿಸಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ವಿನಾಯಕನ ಕುರಿತು ಅಲ್ಲಿನ ಸಹಾಯವಾಣಿ ಅಧಿಕಾರಿಗಳು ಆತನ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿದಾಗ ಆತ ಹುಬ್ಬಳ್ಳಿಯಿಂದ ಬಂದಿರುವುದಾಗಿ ತಿಳಿದಿದೆ. ನಂತರ ಧಾರವಾಡ ಮಕ್ಕಳ ಸಹಾಯವಾಣಿಗೆ ಸಂಪರ್ಕಿಸಿ ವಿನಾಯಕನ ಸಂಪೂರ್ಣ ಮಾಹಿತಿ ನೀಡುವುದಲ್ಲದೇ, ಆತನ ಕುರಿತಾದ ಚಿತ್ರಸಹಿತ ವಿವರಣೆಯನ್ನು ಫ್ಯಾಕ್ಸ್ ಮಾಡಿದ್ದಾರೆ.
ಬಡತನವೆಂದರೆ ಹೀಗೆ: ನಾಪತ್ತೆಯಾದ ಮಗ ಕೇರಳದಲ್ಲಿದ್ದಾನೆಂದು ಗೊತ್ತಾದಾಗಲೂ ತಂದೆ-ತಾಯಿ ಕೇರಳಕ್ಕೆ ಹೋಗಿ ಕರೆದುಕೊಂಡು ಬರುವಷ್ಟು ಆರ್ಥಿಕ ಸ್ಥಿತಿವಂತರಲ್ಲ. ಸಹಾಯವಾಣಿ ಸದಸ್ಯರೇ ಮಗುವನ್ನು ಕರೆದುಕೊಂಡು ಬಂದು ತಂದೆ-ತಾಯಿ ಮಡಿಲಿಗೆ ಹಾಕಿದ್ದಾರೆ. ಶುಕ್ರವಾರ ಅಧಿಕಾರಿಗಳು ಬಾಲಕನನ್ನು ಅವರ ತಂದೆ-ತಾಯಿಗೆ ಒಪ್ಪಿಸಿದರು.