ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ನರೇಂದ್ರ ರಾಜಿನಾಮೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 20
ಇಲ್ಲಿನ ರಂಗಾಯಣದ ನಿರ್ದೇಶಕ ಸುಭಾಸ ನರೇಂದ್ರ ಅವರು ತಮ್ಮ ರಾಜಿನಾಮೆ ಪತ್ರವನ್ನು ಶನಿವಾರ ಸರ್ಕಾರದ ಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ.
ಜು. 6ರಂದೇ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕೆಂದು ಸರ್ಕಾರ ಆದೇಶ ಮಾಡಿತ್ತು. ಆದರೆ, ಸುಭಾಸ ನರೇಂದ್ರ ಅವರು ರಾಜಿನಾಮೆ ನೀಡಿರಲಿಲ್ಲ. ಈ ಕುರಿತು 'ಕನ್ನಡಪ್ರಭ' ಜು. 19ರಂದು ಕುರ್ಚಿ ತ್ಯಜಿಸದ ರಂಗಾಯಣ ನಿರ್ದೇಶಕ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಜು. 20ಕ್ಕೆ ತಾವು ನಿರ್ದೇಶಕ ಹುದ್ದೆ ಪಡೆದು ಬರೋಬ್ಬರಿ ಒಂದು ವರ್ಷವಾಗುವ ಹಿನ್ನೆಲೆಯಲ್ಲಿ ಸುಭಾಸ ನರೇಂದ್ರ ಅವರು ರಾಜಿನಾಮೆ ಪ್ರಕ್ರಿಯೆ ಮುಂದೂಡಿ ಕೊನೆಗೂ ಜು. 20ರಂದೇ ರಾಜಿನಾಮೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶಕ್ಕೆ ತಲೆ ಬಾಗಲೇಬೇಕು. ಆದೇಶದಂತೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದರು. ಆಡಳಿತದ ಒಂದೇ ವರ್ಷದಲ್ಲಿ ರಂಗಾಯಣದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ ಎಂಬ ನೆಮ್ಮದಿ ನನಗಿದೆ. ಆದರೆ, ಸರ್ಕಾರ ಯಾವುದೇ ಅಕಾಡೆಮಿ, ನಿಗಮ, ಮಂಡಳಿ ಅಥವಾ ರಂಗಾಯಣಕ್ಕೆ ಕನಿಷ್ಠ ಮೂರು ವರ್ಷದ ಅಧಿಕಾರ ನೀಡಿದರೆ ಏನಾದರೂ ಕೆಲಸ ಮಾಡಬಹುದು ಎಂಬ ಒಂದು ಕೊರಗು ನನ್ನನ್ನೂ ಎಂದು ಬೇಸರ ವ್ಯಕ್ತಪಡಿಸಿದರು.
ಏನೇನು ಮಾಡಿದ್ದೇನೆ: ಒಂದು ವರ್ಷದ ಅವಧಿಯಲ್ಲಿ ರಂಗ ತರಬೇತಿ ಶಿಬಿರಗಳು, ವೃತ್ತಿ, ಹವ್ಯಾಸಿ ನಾಟಕ ತಂಡಗಳಿಂದ ನಾಟಕ ಪ್ರದರ್ಶನ, ಮಕ್ಕಳ ನಾಟಕೋತ್ಸವ ಸೇರಿದಂತೆ 73 ಕಾರ್ಯಕ್ರಮಗಳನ್ನು ಮಾಡಿದ್ದೇನೆ. ರಂಗ ಜೋಳಿಗೆ ಎಂಬ ಕಾರ್ಯಕ್ರಮ ಮೂಲಕ ನಾಟಕ ಕೃತಿಗಳನ್ನು ಸಂಗ್ರಹಿಸಿದ್ದೇನೆ. ನಿರಾಶ್ರಿತರ ಕೇಂದ್ರದಲ್ಲಿನ 150 ನಿರಾಶ್ರಿತರಿಗೆ ಪ್ರಸ್ತುತ ರಂಗ ತರಬೇತಿ ನಡೆಯುತ್ತಿದ್ದು, ಇದೊಂದು ವಿಶೇಷ ಕಾರ್ಯಕ್ರಮ. ಮಹಿಳಾ ತಂಡಗಳಿಗೆ, ಮಕ್ಕಳಿಗೆ ರಂಗ ತರಬೇತಿ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳುವ ಚಿಂತನೆ ನನ್ನದಿತ್ತು. ಈ ಯೋಜನೆಗಳಿಗೆ ಸರ್ಕಾರದಿಂದ ಒಪ್ಪಿಗೆ ಸಹ ಪಡೆದಿದ್ದೇನೆ. ನಟರಾಜ ಏಣಗಿ ಅವರ ಕನಸನ್ನು ನಾನು ನನಸು ಮಾಡಿದ್ದು, ನನ್ನ ಕನಸುಗಳನ್ನು ಮುಂದಿನ ನಿರ್ದೇಶಕರು ಸಾಕಾರಗೊಳಿಸಬೇಕೆಂದು ಮನವಿ ಮಾಡಿದರು.