ನಿರಂತರ ನೀರು: ನಾಳೆ ಕಾರ್ಯಾಗಾರ
ಧಾರವಾಡ: ಇಲ್ಲಿನ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು, ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪಮೆಂಟ್ ರಿಸರ್ಚ್ (ಸಿಎಂಡಿಆರ್) ಹಾಗೂ ಕ್ಯಾಲಿಫೋರ್ನಿಯಾ ವಿವಿಯು ಜಂಟಿಯಾಗಿ ಜು. 22ರಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿರಂತರ ನೀರು ಪೂರೈಕೆಯ ಮೌಲ್ಯಮಾಪನ ಕುರಿತು ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿವೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಎಸ್ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ಮೋಹನ ಕುಮಾರ, ಕಾಲೇಜು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಉತ್ತರ ವಲಯದ ಮುಖ್ಯ ಅಭಿಯಂತರ ಜಿ.ಎಂ. ಮಾದೇಗೌಡ ಭಾಗವಹಿಸಲಿದ್ದು, ಎಸ್ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿನೇಂದ್ರ ಪ್ರಸಾದ ಶುಭ ಕೋರುವರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಆರ್. ಪಂಚಮುಖಿ ಅಧ್ಯಕ್ಷತೆ ವಹಿಸುತ್ತಾರೆ ಎಂದು ಹೇಳಿದರು.
ಸಿಎಂಡಿಆರ್ ಪ್ರಾಧ್ಯಾಪಕಿ ಡಾ. ನಯನತಾರಾ ಮಾತನಾಡಿ, ಅವಳಿ ನಗರದ ಒಟ್ಟು ಎಂಟು ವಾರ್ಡ್ಗಳಲ್ಲಿ ಈಗಾಗಲೇ ನಿರಂತರ ನೀರು ಯೋಜನೆ ಅಳವಡಿಸಲಾಗಿದೆ. ಕಳೆದ ಮೂರು ವರ್ಷದಿಂದ ನಾವು ಈ ವಾರ್ಡ್ಗಳಲ್ಲಿ ಸಂಶೋಧನೆ ಮಾಡಲಾಗಿದೆ. ನಿರಂತರ ನೀರು ಬರುವ ವಾರ್ಡ್ ಹಾಗೂ ಬರದಿರುವ ವಾರ್ಡ್ಗಳ ಒಟ್ಟು ನಾಲ್ಕು ಸಾವಿರ ಮನೆಗಳಿಗೆ ಭೇಟಿ ನೀಡಲಾಗಿದೆ. ಪಾಲಿಕೆಯ 66 ಸದಸ್ಯರ ಜೊತೆ ಚರ್ಚಿಸಲಾಗಿದೆ. ಇದರಿಂದ ಆಡಳಿತಾತ್ಮಕ ತೊಂದರೆಗಳು ಇವೆಯೇ ಅಥವಾ ಇಲ್ಲವೋ ಎಂಬುದನ್ನು ಸಂಶೋಧನೆಯಲ್ಲಿ ಅರಿಯಲಾಗಿದೆ. ನಿರಂತರ ನೀರು ಯೋಜನೆಯ ನೀರಿನ ಗುಣಮಟ್ಟ ಹೇಗಿರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುವುದೇ, ಯೋಜನೆಯಿಂದ ಕೌಟುಂಬಿಕ ವೆಚ್ಚಗಳು ಮತ್ತು ಸಮಯದ ಉಳಿತಾಯ, ನೀರಿನ ಬಳಕೆ ಎಷ್ಟು ಹೀಗೆ ಅನೇಕ ರೀತಿಯಲ್ಲಿ ಸಂಶೋಧನೆ ನಡೆದಿದ್ದು, ಕಾರ್ಯಾಗಾರದ ದಿನ ವಿಷಯ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ ಎಂದರು.
ಕ್ಯಾಲಿಫೋರ್ನಿಯಾ ವಿವಿಯ ಪ್ರಾಧ್ಯಾಪಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ತಾವು ಮೂರು ಸಂಸ್ಥೆಗಳು ಜಂಟಿಯಾಗಿ ನಡೆಸಿದ ಈ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ವರದಿ ಅನ್ವಯ ರಾಜ್ಯದ ಹಾಗೂ ದೇಶದ ಎಲ್ಲ ನಗರಗಳು ವರದಿಯಂತೆ ಯೋಜನೆಯನ್ನು ಅಳವಡಿಸಿಕೊಳ್ಳಬಹುದು ಎಂದ ನಯನ ತಾರಾ, ಪ್ರತಿ ವಿಷಯ ಮಂಡನೆ ನಂತರ ಮುಕ್ತ ಹಾಗೂ ಗುಂಪು ಚರ್ಚೆ ಏರ್ಪಡಿಸಲಾಗಿದೆ ಎಂದು ಹೇಳಿದರು.