ಲೋಕ ಕಲ್ಯಾಣಕ್ಕೆ ಅವತರಿಸಿದ ಬಸವಾನಂದ ಶ್ರೀ
ಅಣ್ಣಿಗೇರಿ: ಸಾಸ್ವಿಹಳ್ಳಿ ಬಸವಾನಂದ ಶ್ರೀಗಳು ಸಾಧು-ಸತ್ಪುರುಷರಲ್ಲಿಯೇ ವಿಶಿಷ್ಟ ಸದಾಚಾರಗಳಿಂದ, ವೈಶಿಷ್ಟ್ಯಪೂರ್ಣ, ಮೌನ ತಪಸ್ವಿ, ಸಿದ್ಧಿ ಪುರುಷ, ತ್ರಿಕಾಲ ಜ್ಞಾನಿ, ಪವಾಡಪುರುಷರೆನಿಸಿ ಲೋಕ ಕಲ್ಯಾಣಕ್ಕೆ ಅವತರಿಸಿದ ಮಹಾತ್ಮರು.
ಸಾಸ್ವಿಹಳ್ಳಿಯ ಬಸಪ್ಪ-ಈರಮ್ಮ ದಂಪತಿಗಳ ಮೂರನೇ ಮಗುವಾಗಿ ಸಣ್ಣಬಸಪ್ಪನವರು ಜನಿಸಿದರು. ಬಾಲ್ಯದಿಂದಲೂ ಅಧ್ಯಾತ್ಮದತ್ತ ಒಲವು ಹೊಂದಿದ್ದರು. ಗ್ರಾಮದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಾಸ್ವಿಹಳ್ಳಿಯಲ್ಲಿ 5ನೇ ತರಗತಿ ತೇರ್ಗಡೆಯಾಗಿ ನಂತರ ಅದರಗುಂಚಿ ಗ್ರಾಮಕ್ಕೆ ತೆರಳಿ ವಾರದ ಮನೆ ಊಟ ಮಾಡಿ ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ತದನಂತರ ತಾವು ಕಲಿತ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾದರು. ಅಧ್ಯಾತ್ಮದ ಚಿಂತನೆ ಹಸಿವು ಹಿಂಗಿಸಿಕೊಳ್ಳಲು ಶಿಕ್ಷಕ ವೃತ್ತಿ ತೊರೆದು ಗದಗ ಶಿವಾನಂದ ಮಠಕ್ಕೆ ಸೇರಿದರು. ಮಠದಲ್ಲಿ ಸದಾಶಿವಾನಂದ ನೆಚ್ಚಿನ ಶಿಷ್ಯರಾದರು.
ಮಠದಲ್ಲಿದ್ದ ಬಸಪ್ಪನನ್ನು ಕರೆದುಕೊಂಡು ಹೋಗಲು ಹೆತ್ತವರು ಬಂದಾಗ ಶ್ರೀಗಳು ಅವರಿಗೆ ತಿಳಿವಳಿಕೆ ನೀಡಿ, ಅಧ್ಯಾತ್ಮ ಶಿಖರದಲ್ಲಿರುವ ಬಸಪ್ಪನ ಮನೋಭಾವಕ್ಕೆ ತಡೆ ಮಾಡಬೇಡಿ, ಬೇಕಾದಾಗ ಬಂದು ನೋಡಿ ಹೋಗಿರಿ ಎಂದು ಹೇಳಿದರು. ನಿಮ್ಮೂರಿನಲ್ಲಿ ಹೋಗಿ ನೆಲೆಸು, ಸಮಾಜಕ್ಕೆ ನಿನ್ನ ಕೊಡುಗೆ ಬಹಳವಿದೆ ಎಂದು ಗುರುಗಳು ಹಾರೈಸಿ ಸಾಸ್ವಿಹಳ್ಳಿಗೆ ಕಳಿಸಿದರು.
ಬೆನಕನಳ್ಳಿ ಶಿವಯ್ಯನವರು ಬಸವಾನಂದ ಶ್ರೀಗಳ ದರುಶನಕ್ಕೆ ಬಂದ ಭಕ್ತರ ಪ್ರಸಾದ ವ್ಯವಸ್ಥೆಗೆ ತಮ್ಮ ಜಮೀನಿನಲ್ಲಿ ಮಠಕ್ಕೆ ಜಾಗ ನೀಡಿದರು. ಕಾವಿ ಧರಿಸದೇ ಬಿಳಿ ಚಿಂದಿ ಬಟ್ಟೆ ಧರಿಸಿದರು. ಒಂದೇ ಶಿಲಾಸನದಲ್ಲಿ ವಾರಾನುಸಾರ ನಿದ್ದೆಯಿಲ್ಲದೆ ವರ್ಷಾನು-ವರ್ಷ ಕಳೆದರು. ಮಠ ಮಾನ್ಯ ನಿರ್ಮಿಸಿ ಬೆಳೆಸಬೇಕೆಂಬ ಚಿಂತನೆ ಇಲ್ಲದೇ ಅವರೊಬ್ಬ ತ್ಯಾಗಿ, ಜೀವನ್ಮುಕ್ತಿ, ಹವ್ಯಾಸದ ಭೋಗಿ, ಪರಚಿಂತನೆ, ಗುರುಸೇವೆ, ಶಿವಾನಂದ ಶ್ರೀಗಳಿಂದ ದೃಢ ಜ್ಞಾನ ಪಡೆದ ಬಸವಾನಂದರು. ಅನಾತ್ಮ ಪದಾರ್ಥಗಳನ್ನು ತ್ಯಜಿಸಿ ಸಮಬುದ್ಧಿಯ ವಿಷಯ ಕಲ್ಪನೆ ಕಳೆದು ಆತ್ಮೈಕ್ಯ ಜ್ಞಾನ ಹೊಂದಿ ಪವಿತ್ರಾತ್ಮ ಚೈತನ್ಯದಲ್ಲಿ ದೇಹ ತ್ಯಜಿಸಿದ ಮಹಿಮಾ ಪುರುಷರಾದರು. ಸಾಸ್ವಿಹಳ್ಳಿಯಲ್ಲಿ ಸದ್ಗುರು ಬಸವಾನಂದ ಮಠ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಬಸವಾನಂದ ಶ್ರೀಗಳ ಕರ್ತೃಗದ್ದುಗೆ ಮೂಲಕ ಗುರು ತೋರಿದ ಮಾರ್ಗದಲ್ಲಿ ಭಕ್ತರು ಪರಿಹಾರ ಕಾಣುತ್ತಾ ಬರುತಿಹರು.