ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗದರ್ಶನ ಕಾರ್ಯ ಶ್ಲಾಘನೀಯ
ಕ.ಪ್ರ.ವಾರ್ತೆ ಹುಬ್ಬಳ್ಳಿ ಜು.20
ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಮಾಹಿತಿಯ ಕೊರತೆಯಿಂದಾಗಿ ತಮ್ಮ ಆಸಕ್ತಿಯೇತರ ಶಿಕ್ಷಣ ಪಡೆಯುವ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.
'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಹಾಗೂ 'ಕನ್ನಡಪ್ರಭ' ದಿನಪತ್ರಿಕೆ ಸಂಯುಕ್ತವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ 'ಶಿಕ್ಷಣ ಮೇಳ-2013' ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಮಾಹಿತಿ ಒದಗಿಸುವ ಮೂಲಕ ಈ ಪತ್ರಿಕೆಗಳು ಉತ್ತಮ ಕೆಲಸಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಧ್ಯಮಗಳೆಂದರೆ ಸಾಮಾನ್ಯ ಸುದ್ದಿಗಳಿಗೂ ಪ್ರಚೋದನೆ ನೀಡಿ ವೈಭವೀಕರಿಸುವ ಈ ದಿನಗಳಲ್ಲಿ 'ಕನ್ನಡಪ್ರಭ' ಮತ್ತು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ. ಅಶೋಕ್ ಶೆಟ್ಟರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಗುರಿ ಆಯ್ದುಕೊಂಡು ಆ ನಿಟ್ಟಿನಲ್ಲಿ ಶಿಕ್ಷಣ ಪಡೆಯಬೇಕು ಎಂದರು.
ಅತಿಥಿಯಾಗಿದ್ದ ಸ್ಪರ್ಧಾಸ್ಫೂರ್ತಿ ಪ್ರಧಾನ ಸಂಪಾದಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಕೇಂದ್ರ ಲೋಕಸೇವಾ ಆಯೋಗದಿಂದ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ವಿವರ ನೀಡಿದರು. ವಿದ್ಯಾಭ್ಯಾಸಕ್ಕೆ ಬ್ಯಾಂಕ್ನಿಂದ ಪಡೆಯುವ ಸಾಲದ ಕುರಿತು ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಜನ್ ಮಾಹಿತಿ ನೀಡಿದರು.
'ಕನ್ನಡಪ್ರಭ' ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಜಿ.ವಿ. ಯತಿರಾಜು ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಇರುವ ಅವಕಾಶಗಳ ಕುರಿತು ತಿಳಿಸಿದರು. ಪತ್ರಿಕೆಯ ಶಿವಮೊಗ್ಗ ಛಾಯಾಗ್ರಹಕ ಶಿವಮೊಗ್ಗ ನಂದನ್ ಮಾತನಾಡಿದರು. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರ ಅನಿಲ ಗೆಜ್ಜಿ, ಶಿವಮೊಗ್ಗ ಆವೃತ್ತಿ ವ್ಯವಸ್ಥಾಪಕ ಎಲ್.ಎನ್. ಮೂರ್ತಿ ಮತ್ತು 6ರೀವ್ಸ್ ಮುಖ್ಯಸ್ಥ ಯುವರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 'ಕನ್ನಡಪ್ರಭ' ಹಿರಿಯ ವರದಿಗಾರ ಪ್ರಕಾಶ್ ಶೇಟ್ ನಿರೂಪಿಸಿದರು.