ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾಂಸ್ಕೃತಿಕ ನೀತಿ ಶೀಘ್ರ ಜಾರಿ: ಉಮಾಶ್ರೀ

Vishwanath S
Updated On : 21 Jul 2013, 11:33 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 20
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡುವ ಮೂಲಕ ಹಿರಿಯ ಸಾಹಿತಿಗಳು, ಸಾಂಸ್ಕೃತಿಕ ರಾಯಭಾರಿಗಳು, ಬುದ್ಧಿಜೀವಿಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದು, ಸದ್ಯದಲ್ಲಿಯೇ ಸಾಂಸ್ಕೃತಿಕ ನೀತಿ ಜಾರಿಗೆ ಬರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ 124ನೇ ಸಂಸ್ಥಾಪನಾ ದಿನಾಚರಣೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ ಬಂದಿರುವ ಶಾಸ್ತ್ರೀಯ ಭಾಷೆಯ ಸ್ಥಾನ-ಮಾನ ಕುರಿತಂತೆ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಶೀಘ್ರವೇ ಸ್ಪಷ್ಟ ನಿಲುವು ತಾಳಲಾಗುವುದು ಎಂದು ತಿಳಿಸಿದರು.
ರಂಗಭೂಮಿ, ಜಾನಪದ ಸೇರಿದಂತೆ ಎಲ್ಲ ಕ್ಷೇತ್ರಗಳ ಕಲಾವಿದರಿಗೆ ಗೌರವಧನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ವಿವಿಧ ರಂಗಾಯಣದ ನಿರ್ದೇಶಕರು ಈಗಾಗಲೇ ರಾಜಿನಾಮೆ ಸಲ್ಲಿಸಿದ್ದು, ಈ ಹುದ್ದೆಗೆ ಆದಷ್ಟು ಬೇಗ ಅರ್ಹ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದರು.
ಕನ್ನಡದ ಗುಡಿ: ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸಾಮಾನ್ಯ ಪದಗಳಲ್ಲಿ ಅರ್ಥೈಸಲಾಗುವುದಿಲ್ಲ. ವಿದ್ಯಾವರ್ಧಕ ಕನ್ನಡದ ಗುಡಿ ಎಂದು ಬಣ್ಣಿಸಿದ ಉಮಾಶ್ರೀ, ನಮ್ಮ ಹಿರಿಯರು ಹೋರಾಟದ ಮೂಲಕವೇ ಎಲ್ಲವನ್ನು ಪಡೆದರು. ಅಲ್ಲದೆ, ಹೋರಾಟದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಆ ಸ್ವಾತಂತ್ರ್ಯವನ್ನು ಸಾವು ಸರಿಯಾಗಿ ಬಳಸಿಕೊಳ್ಳಲು, ಅನುಭವಿಸಲು ಆಗುತ್ತಿಲ್ಲ ಎಂದು ಉಮಾಶ್ರೀ ವಿಷಾದ ವ್ಯಕ್ತಪಡಿಸಿದರು.
ಹಿಂದಿನ ಹೋರಾಟಗಾರರ ಮಾದರಿಯಲ್ಲಿ, ಅವರ ನಡೆದ ದಾರಿಯಲ್ಲಿ ನಡೆದಾಗ ಕನ್ನಡಕ್ಕೆ ಇನ್ನೂ ಹೆಚ್ಚಿನ ಪುಷ್ಟಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ವಿದ್ಯಾವರ್ಧಕ ಸಂಘದ ಹಾದಿಯಲ್ಲಿ ನಡೆಯಬೇಕು. ಶಿಕ್ಷಣ, ಸಂಸ್ಕೃತಿ, ಸಂಗೀತ ಹಾಗೂ ಆತಿಥ್ಯಕ್ಕೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದ ಧಾರವಾಡ ಹಾಗೂ ವಿದ್ಯಾವರ್ಧಕ ಸಂಘಕ್ಕೆ ಇಲಾಖೆ ಪರವಾಗಿ ಎಲ್ಲ ಸಹಕಾರ ನೀಡುತ್ತೇನೆಂದು ಅವರು ಭರವಸೆ ನೀಡಿದರು.
ಸಾಂಸ್ಕೃತಿಕ ಧ್ರುವ ತಾರೆಗಳು: ಕಲಾವಿದ ಅನಿಲ ದೇಸಾಯಿ ಅವರು ಸಂಪಾದಿಸಿರುವ ಸಾಂಸ್ಕೃತಿಕ 'ಧ್ರುವತಾರೆಗಳು' ಪುಸ್ತಕವನ್ನು ಬಿಡುಗಡೆ ಮಾಡಿದ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ಬೋರ್ಡ್ ಸಿಇಓ ಡಾ. ಮನು ಬಳಿಗಾರ ಮಾತನಾಡಿ, ಎರಡು ಸಾವಿರ ವರ್ಷಗಳ ದಾಖಲಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತರಲು ನಾಲ್ಕೈದು ವರ್ಷ ಹೋರಾಡಬೇಕಾಯಿತು. ನಾವು ಇಂಗ್ಲಿಷ್ ದಾಸರಾಗಿ ಕನ್ನಡವನ್ನು ಮೂಲೆಗುಂಪು ಮಾಡುತ್ತಿದ್ದೇವೆ. ಕನ್ನಡದ ಇತಿಹಾಸ ಕುರಿತು ನಾಡೋಜ ಪಾಟೀಲ ಪುಟ್ಟಪ್ಪನವರು ಬರೆದ ಕನ್ನಡದ ಕಂಪು ಪುಸ್ತಕವನ್ನು ಓದಿದರೆ ಕನ್ನಡದ ಮಹತ್ವ ಅದಕ್ಕೆ ಇರುವ ಇತಿಹಾಸ ತಿಳಿಯುತ್ತದೆ. ಎಲ್ಲ ಕನ್ನಡಿಗರೂ ಆ ಪುಸ್ತಕವನ್ನು ಓದಬೇಕೆಂದು ಮನವಿ ಮಾಡಿದರು.
ಪ್ರೋತ್ಸಾಹಿಸಿ: ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ಜವಾನರಿಗೆ ಪ್ರತಿ ತಿಂಗಳು 10 ಸಾವಿರ ಸಂಬಳವಿದ್ದು, ನಾಡಿನ ಕಲೆಗಳನ್ನು ಉಳಿಸಿ-ಬೆಳೆಸುವ ಕಲಾವಿದರು ಕಡು ಬಡತನದಲ್ಲಿದ್ದಾರೆ. ಕರಡಿಗೆ ಒಂದು ಕೂದಲು ಹೋದರೆ ಏನೂ ಆಗುವುದಿಲ್ಲವೋ ಹಾಗೆಯೇ ಸರ್ಕಾರ ಕಲಾವಿದರಿಗೆ 10 ಸಾವಿರ ಕೊಟ್ಟರೆ ಆರ್ಥಿಕ ನಷ್ಟವೇನೂ ಆಗೋದಿಲ್ಲ. ಈ ಕುರಿತು ಉಮಾಶ್ರೀ ಅವರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹಾಗೆಯೇ, ಲಕ್ಷ್ಮೇಶ್ವರದಲ್ಲಿ ಪಂಪನ ಸ್ಮಾರಕವಾಗಬೇಕೆಂದು ರಾಜ್ಯಪಾಲರಿಗೆ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳಿಗೂ ಈ ಕುರಿತು ಒತ್ತಾಯ ಮಾಡುತ್ತೇನೆ. ಈಗಾಗಲೇ ತೀರ್ಮಾನಿಸಿದಂತೆ 43 ಹೊಸ ತಾಲೂಕುಗಳನ್ನು ರಚನೆ ಮಾಡುವ ಕುರಿತು ಸಿದ್ದರಾಮಯ್ಯನವರು ಶೀಘ್ರ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಮೋಹನ ನಾಗಮ್ಮವರ ವಿದ್ಯಾವರ್ಧಕ ಇತಿಹಾಸ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಕೃಷ್ಣಾ ಜೋಶಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಿವಣ್ಣ ಬೆಲ್ಲದ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಹಿರಿಯರಾದ ಜಿ.ಜಿ. ದೊಡವಾಡ ಮುಂತಾದವರು ಉಪಸ್ಥಿತರಿದ್ದರು.
ಕನ್ನಡಕ್ಕೆ ಬಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕುರಿತು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ಶೀಘ್ರ ಸ್ಪಷ್ಟ ನಿಲುವು ತಾಳಲಾಗುವುದು. ರಂಗಭೂಮಿ, ಜಾನಪದ ಸೇರಿದಂತೆ ಎಲ್ಲ ಕ್ಷೇತ್ರಗಳ ಕಲಾವಿದರಿಗೆ ಗೌರವಧನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿದ್ದೇನೆ. ವಿವಿಧ ರಂಗಾಯಣದ ನಿರ್ದೇಶಕರು ಈಗಾಗಲೇ ರಾಜಿನಾಮೆ ಸಲ್ಲಿಸಿದ್ದು,ಆದಷ್ಟು ಬೇಗ ಅರ್ಹ ನಿರ್ದೇಶಕರನ್ನು ನೇಮಿಸಲಾಗುವುದು.
- ಉಮಾಶ್ರೀ, ಸಚಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement