ಆರ್ಟ್ ಗ್ಯಾಲರಿ ಅಭಿವೃದ್ಧಿಗೆ ಬದ್ಧ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 21
ಇಲ್ಲಿನ ಆರ್ಟ್ ಗ್ಯಾಲರಿಯ ಸಮರ್ಪಕ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದರೆ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಿ ಕೊಡುವ ಪ್ರಯತ್ನ ಮಾಡುತ್ತೇನೆಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ನಗರದ ಆರ್ಟ್ ಗ್ಯಾಲರಿಯಲ್ಲಿ ಉತ್ತರಾಖಂಡ ಜಲಪ್ರಳಯ ಸಂತ್ರಸ್ತರಿಗಾಗಿ ಆರ್.ಕೆ. ಛಾಯಾಫೌಂಡೇಶನ್, ಬಾಲನಂದನ ಟ್ರಸ್ಟ್ ಹಾಗೂ ಇತರೆ ಸಂಸ್ಥೆಗಳು ಜಂಟಿಯಾಗಿ ಶನಿವಾರದಿಂದ ಜು. 30ರ ವರೆಗೆ ಹಮ್ಮಿಕೊಂಡಿರುವ ಛಾಯಾಚಿತ್ರ, ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರ್ಟ್ ಗ್ಯಾಲರಿ ಅಭಿವೃದ್ಧಿಯಿಂದ ಸಾಕಷ್ಟು ಕಲಾವಿದರಿಗೆ ಅನುಕೂಲವಾಗಲಿದ್ದು, ಧಾರವಾಡದ ಹೊರ ವಲಯದಲ್ಲಿರುವ ಕಾಯಕ ನಗರವನ್ನು ಆರ್ಟ್ ಗ್ಯಾಲರಿಗೆ ಹಸ್ತಾಂತರಿಸಿ ಉತ್ತಮ ಚಿತ್ರಕಲೆ ಮತ್ತು ಚಿತ್ರಕಲಾ ಶಿಕ್ಷಣ ಪ್ರಸಾರಕ್ಕೆ ನೆರವು ನೀಡಲಾಗುವುದು ಎಂಬ ಭರವಸೆ ನೀಡಿದರು.
ಇನ್ನೋರ್ವ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಉತ್ತರಾಖಂಡ ಸಂತ್ರಸ್ತರಿಗಾಗಿ ಛಾಯಾಗ್ರಾಹಕರು ತಾವು ಸೆರೆ ಹಿಡಿದ ಅನೇಕ ಅದ್ಭುತ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮೂಲಕ ನೆರವು ನೀಡುತ್ತಿರುವುದು ಸಮಾಜಕ್ಕೆ ಹಾಗೂ ಇತರರರಿಗೆ ಮಾದರಿ ಎಂದರು. ಬಾಲಚಂದ್ರ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾಲ ನಂದನ ಟ್ರಸ್ಟ್ ಅಧ್ಯಕ್ಷರಾದ ಪ್ರೀತಿ ಎನ್.ಕೆ., ಚಿತ್ರಕಲಾ ಕಾಲೇಜು ಪ್ರಾಚಾರ್ಯ ಎನ್.ಎಂ. ದಾಟನಾಳ, ಬಸವರಾಜ ಕುರಿಯವರ, ಕೆ. ಜಗುಚಂದ್ರ, ಕಲಾವಿದರಾದ ಲಕ್ಷ್ಮಣ ಪೀರಗಾರ, ಪ್ರತಾಪ ಬಹುರೂಪಿ, ರಾಘು ಹೆಗ್ಗೋಡು, ಆನಂದ ಸಿಂಗನಾಥ ಇದ್ದರು. ಪ್ರದರ್ಶನದಲ್ಲಿ ಬಳ್ಳಾರಿಯ ಸಿದ್ದಲಿಂಗ ಸ್ವಾಮಿ, ಹೊಸಪೇಟೆಯ ನವೀನಕುಮಾರ ಹೊಸಪೇಟೆ, ರಾಣಿಬೆನ್ನೂರಿನ ನಾಮದೇವ ಕಾಗದಗಾರ, ಗದಗನ ಸಲೀಂ ಬಳಿಪಟ್ಟಿ, ಧಾರವಾಡದ ಪರಶುರಾಮ ನೀಲಾರ, ಅನಿಲ ಕಿತ್ತೂರು, ಭರತ ಯರಗಟ್ಟಿ, ರಮೇಶ ಬಾರ್ಕಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ವಿವಿಧ ಛಾಯಾಗ್ರಾಹಕರ ಚಿತ್ರಗಳು ಹಾಗೂ ಮಾಧ್ಯಮ ಛಾಯಾಗ್ರಾಹಕರಾದ ಬಿ.ಎಂ. ಕೇದಾರನಾಥ, ರಾಮಚಂದ್ರ ಕುಲಕರ್ಣಿ, ಶಿವಲಿಂಗ ಪಾಟೀಲ, ಸಚ್ಚಿದಾನಂದ ಸ್ವಾಮಿ, ಶಕೀಲ ಮುಲ್ಲಾ, ಚಿತ್ರ ಕಲಾವಿದರಾದ ರಶ್ಮೀ ಕುರ್ತಕೋಟಿ, ಟಿಕ್ಕಾ ಮರಾಠೆ, ಸಕ್ಕೂಬಾಯಿ ಬಹುರೂಪಿ ಅವರ ಕಲಾಕೃತಿಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ.
--