ನೀರಿನ ಅಕ್ರಮ ತಡೆಗೆ ಟಾಸ್ಕ್ಫೋರ್ಸ್: ಎಚ್ಕೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 21
ಕುಡಿಯುವ ನೀರು ಪೂರೈಕೆಯ ಪೈಪ್ಗಳಿಂದ ಅಕ್ರಮ ಜೋಡಣೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಪ್ರವಾಸಿ ಗೃಹದಲ್ಲಿ ಭಾನುವಾರ ಧಾರವಾಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ವಿಫಲವಾಗಲು, ಮುಖ್ಯ ಪೈಪ್ಲೈನ್ಗೆ ಕನ್ನಹಾಕಿ ಅಕ್ರಮವಾಗಿ ನೀರಿನ ಸಂಪರ್ಕ ಪಡೆದುಕೊಳ್ಳುತ್ತಿರುವುದು ಪ್ರಮುಖ ಕಾರಣವಾಗಿದೆ. ಇದನ್ನು ಪರಿಹರಿಸಲು ಜಿಲ್ಲಾಧಿಕಾರಿ ಸೇರಿದಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎಸ್ಪಿ, ತಹಸೀಲ್ದಾರ್, ತಾಪಂ ಸಿಇಒ ಒಳಗೊಂಡ ಟಾಸ್ಕ್ಫೋರ್ಸ್ ರಚಿಸಲಾಗುವುದು ಎಂದರು.
ಬಂದ ದೂರಿನನ್ವಯ ಈ ಸಮಿತಿ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಕೆಲ ಜನಪ್ರತಿನಿಧಿಗಳೇ ಇಂತಹ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದರೆ ಅಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಚಿವ ಪಾಟೀಲ ಸೂಚನೆ ನೀಡಿದರು.
ಅಕ್ರಮ ನೀರಿನ ಜೋಡಣೆಯ ಗಂಭೀರ ಸಮಸ್ಯೆಯನ್ನು ಶಾಸಕ ವಿನಯ ಕುಲಕರ್ಣಿ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ಸಭೆಯ ಗಮನಕ್ಕೆ ತಂದರು.
ಹಳೆಮಲಪ್ರಭಾ ಯೋಜನೆಗೆ ಜೀವ
ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಲಪ್ರಭಾ ನೀರಿನ ಹಳೆಯ ಯೋಜನೆಗೆ ಜೀವ ತುಂಬುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿದೆ. ಈ ಯೋಜನೆಯಿಂದಾಗಿ ಎರಡೂ ಜಿಲ್ಲೆಗಳ ಸುಮಾರು 60ಕ್ಕೂ ಹೆಚ್ಚು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಸಾಧ್ಯ. ಈ ಯೋಜನೆಯ ಕುರಿತು ಸರ್ವೇ ಕಾರ್ಯ ನಡೆಸಲು ಬೆಂಗಳೂರಿನಿಂದ ಅಧಿಕಾರಿಗಳು, ತಜ್ಞರ ತಂಡವನ್ನು ಒಂದು ವಾರದೊಳಗಾಗಿ ಕರೆಯಿಸಲಾಗುವುದು. ಆ ಬಳಿಕ ಯೋಜನೆ ಕಾರ್ಯರೂಪಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಸಭೆಗೆ ತಿಳಿಸಿದರು.
137 ಘಟಕ: ಧಾರವಾಡ ಜಿಲ್ಲೆಯಲ್ಲಿ 137 ಕಡೆಗಳಲ್ಲಿ ಪ್ರಥಮ ಹಂತದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಇಲಾಖೆ ಮುಂದಾಗಿದೆ. ಶುದ್ಧ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಿದೆ. ಘಟಕ ಸ್ಥಾಪನೆಯ ನೀಲನಕ್ಷೆ ಸೇರಿದಂತೆ ಇನ್ನಿತರ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಷ್ಟರಲ್ಲೇ ಕಾಮಗಾರಿ ಆರಂಭವಾಗಲಿದೆ.
9 ಬಾಕಿ ಯೋಜನೆಗೆ ಮಂಜೂರಾತಿ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಾನಾ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 9 ಯೋಜನೆಗಳು ತಾಂತ್ರಿಕ ತೊಂದರೆಯಿಂದಾಗಿ ಹಾಗೂ ಇಲಾಖೆಯಲ್ಲಿ ಕಡತ ವಿಲೇವಾರಿಯಾಗದಿರುವುದರಿಂದ ಯೋಜನೆಗೆ ಮಂಜೂರಾತಿ ಸಿಕ್ಕಿಲ್ಲ ಎಂದು ಜಿಪಂ ಸಿಇಒ ಮೇಘಣ್ಣವರ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ, ಮುಂದಿನ ವಾರ ಬೆಂಗಳೂರಿನಲ್ಲಿ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕೆಯುಡಬ್ಲೂಎಸ್ಬಿ ವ್ಯವಸ್ಥಾಪಕ ನಿರ್ದೇಶಕ, ಟಿಎಸಿ ಚೇರ್ಮನ್, ಧಾರವಾಡ ಜಿಲ್ಲಾಧಿಕಾರಿ, ಜಿಪಂ ಸಿಇಒ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಮಂಜೂರಾತಿ ಸಿಗದೇ ಬಾಕಿ ಉಳಿದ ಯೋಜನೆಗೆ ಮಂಜೂರಾತಿ ಕೊಡಿಸಲಾಗುವುದು, ಹೊಸ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ, ಸಿ.ಎಸ್. ಶಿವಳ್ಳಿ, ಎನ್. ಎಚ್. ಕೋನರಡ್ಡಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮತ್ತಿತರರು ಇದ್ದರು.
ಹೊಂದಾಣಿಕೆ ಇರಲಿ..
ಒಂದೇ ಯೋಜನೆ ಬಗ್ಗೆ ಅಧಿಕಾರಿಗಳ ಪೈಕಿ ಒಬ್ಬೊಬ್ಬರು ಒಂದೊಂದು ತೆರನಾಗಿ ಮಾಹಿತಿ ನೀಡುತ್ತಿದ್ದದ್ದು, ಸಚಿವ ಪಾಟೀಲ ಹಾಗೂ ಮಾಜಿ ಸಚಿವ ಹೊರಟ್ಟಿಯವರನ್ನು ಕೆರಳಿಸಿತು. ನಿಮ್ಮಲ್ಲಿ ಹೊಂದಾಣಿಕೆಯಿಲ್ಲ, ಮಾಹಿತಿಯೂ ಇಲ್ಲ. ಸಭೆಗೆ ಬರುವ ಮುನ್ನ ಎಲ್ಲ ಮಾಹಿತಿಯೊಂದಿಗೆ ಬರಬೇಕೆಂಬ ಸಾಮಾನ್ಯಜ್ಞಾನ ನಿಮ್ಮಲ್ಲಿಲ್ಲ. ಹೀಗಿದ್ದರೆ ಸಭೆಗೆ ಬರುವುದೇ ಬೇಡ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ
ಜಿಲ್ಲೆಯ 15 ಗ್ರಾಮಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಈ ಗ್ರಾಮಗಳಿಗೆ ಇಂದಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಪೈಕಿ 9 ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ನೀರು ಪೂರೈಕೆ ಮಾಡುವ ರು. 16 ಕೋಟಿ ಯೋಜನೆ ರೂಪಿಸಲಾಗಿದ್ದು, ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಸಿಇಒ ಮೇಘಣ್ಣವರ ಸಭೆ ಗಮನಕ್ಕೆ ತಂದರು. ಇನ್ನುಳಿದ 6 ಗ್ರಾಮಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡುವ ಯೋಜನೆಯ ನೀಲನಕ್ಷೆ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಸಿಗದಿರುವ 34 ಗ್ರಾಮಗಳು ಜಿಲ್ಲೆಯಲ್ಲಿವೆ, ಈ ಗ್ರಾಮಗಳಿಗೆ ನೀರು ಪೂರೈಸುವ 1.8 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ನೀರಿನ ತೊಂದರೆ ಅನುಭವಿಸುವ ಸಾಧ್ಯತೆಯುಳ್ಳ 26 ಗ್ರಾಮಗಳಿದ್ದು, ಅದರ ಪರಿಹಾರಕ್ಕೆ ರು. 60 ಲಕ್ಷದ ಯೋಜನೆ ಸಿದ್ಧಗೊಂಡಿದೆ ಎಂದು ಮೇಘಣ್ಣವರ ತಿಳಿಸಿದರು. ಕಳೆದ ಎರಡು ವರ್ಷದಿಂದ 15 ಗ್ರಾಮಕ್ಕೆ ನೀರು ಪೂರೈಸಲು ಹೊಸ ಯೋಜನೆ ಕೈಗೆತ್ತಿಕೊಳ್ಳದೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾ ಬಂದಿರುವ ಕ್ರಮದ ಬಗ್ಗೆ ಸಚಿವ ಪಾಟೀಲ ಬೇಸರ ವ್ಯಕ್ತಪಡಿಸಿದರು. ಹೊಸ ಯೋಜನೆಗಳ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.