ರಂಗಭೂಮಿ ಒಟ್ಟಾಗಿ ಅಖಾಡಕ್ಕೆ ಇಳಿಯಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 21
ನಾಟಕ ಕುರಿತು ತೀವ್ರವಾಗಿ ಯೋಚನೆ ಮಾಡುವವರು ಒಂದೆಡೆ ಸೇರಬೇಕಿದೆ. ಆ ಮೂಲಕ ಹವ್ಯಾಸಿ, ವೃತ್ತಿಪರ ಎಂದು ಒಡೆದು ಹೋಗಿರುವ ರಂಗಭೂಮಿ ಕಲಾವಿದರು ಒಗ್ಗಟ್ಟಾಗಿ ಅಖಾಡಕ್ಕೆ ಬರಬೇಕು. ಶಿಕ್ಷಣಕ್ಕೆ ರಂಗಭೂಮಿಯ ಅಗತ್ಯತೆಯನ್ನು ಮನಗಾಣಿಸಲಾದರೂ ನಾವು ಒಂದಾಗಬೇಕೆಂದು ಖ್ಯಾತ ರಂಗಕರ್ಮಿ ಡಾ. ಪ್ರಕಾಶ ಗರುಡ ಅಭಿಪ್ರಾಯಿಸಿದರು.
ಇಲ್ಲಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ಬೆಂಗಳೂರಿನ ಐಎಫ್ಎ ಹಾಗೂ ರಾಜ್ಯ ನೃತ್ಯ ನಾಟಕ ಶಿಕ್ಷಕರ ಹಾಗೂ ಕಲಾವಿದರ ವೇದಿಕೆ ಏರ್ಪಡಿಸಿದ್ದ 'ಶಿಕ್ಷಣದಲ್ಲಿ ರಂಗಕಲೆ' ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಂಗ ಶಿಕ್ಷಕರಾದ ನಮಗೆ ನಾವೇ ಸ್ಪರ್ಧಿಗಳು. ನಮ್ಮ ಹಿಂದಿನ ಹಾಗೂ ಇಂದಿನ ಯೋಚನೆಗಳನ್ನು ಅವಲೋಕನ ಮಾಡಿಕೊಳ್ಳಬೇಕು. ರಂಗಭೂಮಿಯಲ್ಲಿ ನಟನ ಪಾತ್ರ ಎಷ್ಟು ಮುಖ್ಯವೋ, ತರಗತಿಯಲ್ಲಿ ಶಿಕ್ಷಕನ ಪಾತ್ರ ಅಷ್ಟೇ ಮುಖ್ಯ. ಒಬ್ಬ ಶಿಕ್ಷಕ ಒಳ್ಳೆಯ ನಟನಂತಿರಬೇಕು ಎಂದರು.
ಪ್ರಾಯೋಗಿಕ ರಂಗಭೂಮಿಯಲ್ಲಿ ದುಡಿಯುತ್ತಿರುವ ನಾವು ನಾಟಕ ನೋಡುವ ಕ್ರಮ ಬದಲಾಯಿಸಬೇಕು. ಮಕ್ಕಳನ್ನು ಮೊದಲು ಸ್ಥಳೀಯವಾಗಿಸಿ ಸುತ್ತಲಿನ ಕಲಾ ಪ್ರಕಾರಗಳನ್ನು ಪರಿಚಯಿಸಬೇಕು. ಸ್ಥಳೀಯ ಕಲಾವಿದರನ್ನೇ ನೇಮಕ ಮಾಡುವಂತಾದಲ್ಲಿ ಆ ಭಾಗದ ಕಲಾಪ್ರಕಾರಗಳು ಬೆಳೆಯುತ್ತವೆ. ಸ್ಥಳೀಯವಾಗಿ ನಾಟಕಗಳನ್ನು ಕಟ್ಟುತ್ತ ರಂಗಭೂಮಿ ಬೆಳೆಸುವ ಮಾರ್ಗಸೂಚಿ ರೂಪಿಸಿಕೊಳ್ಳಬೇಕು. ಹಾಗಾಗಿ ಶಿಕ್ಷಣದಲ್ಲಿ ರಂಗಭೂಮಿಯ ಮತ್ತು ರಂಗಶಿಕ್ಷಕನ ಪಾತ್ರ ಮಹತ್ವದ್ದು ಎಂದರು.
ಶಿಕ್ಷಕ ರಂಗತಜ್ಞ ನಿಂಗು ಸೊಲಗಿ ಮಾತನಾಡಿ, ಶಿಕ್ಷಣದಲ್ಲಿ ರಂಗಕಲೆ ಎಂದರೆ ಪಠ್ಯವನ್ನು ರಂಗಕ್ಕೆ ಅಳವಡಿಸುವುದಲ್ಲ. ಬದಲಾಗಿ ರಂಗಭೂಮಿಯೇ ಒಂದು ಮಾಧ್ಯಮವನ್ನಾಗಿ ಕಲಿಸುವಂತಾಗಬೇಕು. ಮಕ್ಕಳನ್ನು ಸೃಜನಾತ್ಮಕವಾಗಿ ಬೆಳೆಸಲು ಸಹಾಯಕವಾಗುವ ರಂಗಶಿಕ್ಷಕರ ಅಗತ್ಯತೆಯನ್ನು ಸರ್ಕಾರಕ್ಕೆ ಮನಗಾಣಿಸಿ ರಂಗಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಅಂಗನವಾಡಿಗಳು ರಂಗ ವಠಾರಗಳಾಗಬೇಕು. ಅಂಗನವಾಡಿಗಳಿಂದಲೇ ರಂಗಭೂಮಿಯ ಚಟುವಟಿಕೆ ಆರಂಭಗೊಳ್ಳಬೇಕೆಂದರು.
ಕಾರ್ಯಾಗಾರದ ಸಂಯೋಜಕ ಲಕ್ಷ್ಮಣ ಪೀರಗಾರ, ರಾಮಚಂದ್ರ ಕುಲಕರ್ಣಿ, ರಾಘು ಪುರಪ್ಪೆಮನೆ, ಎನ್.ಎಂ. ದಾಟನಾಳ, ನಾಟಕ ಶಿಕ್ಷಕ ಮಲ್ಲೇಶ ಪಾವಗಡ ಮಾತನಾಡಿದರು. ನಾಟಕ ಶಿಕ್ಷಕ ಸಂತೋಷ ಗುಡ್ಡಯಂಗಡಿ ಪ್ರಾರ್ಥಿಸಿದರು. ರಾಜ್ಯದ ನಾಲ್ಕು ಶೈಕ್ಷಣಿಕ ವಿಭಾಗಗಳ ಪ್ರೌಢಶಾಲೆಗಳ ನಾಟಕ ಶಿಕ್ಷಕರು, ರಾಜ್ಯದ ರಂಗಕಲಾವಿದರ ವೇದಿಕೆಯ ರಂಗಪದವೀಧರ ರಂಗಕಲಾವಿದರು, ರಂಗಾಸಕ್ತರು ಇದ್ದರು. ಹಿರಿಯ ನಾಟಕ ಶಿಕ್ಷಕ ಪ್ರಸಾದ ಬೆಳ್ಳೂರು ನಿರೂಪಿಸಿದರು.