ಅಂಗಡಿಗೆ ನುಗ್ಗಿದ ಒಳಚರಂಡಿ ನೀರು
ಹುಬ್ಬಳ್ಳಿ: ಒಳಚರಂಡಿ ಕಾಮಗಾರಿ ಅವಾಂತರ ಸೃಷ್ಟಿಸುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗಿರುವುದು ಒಂದೆಡೆಯಾದರೆ, ಸೋಮವಾರ ಕಾಮಗಾರಿಯ ವೇಳೆ ಹಳೆಯ ಒಳಚರಂಡಿಯ ಪೈಪ್ ಒಡೆದು ಕೊಳಚೆ ನೀರು ಗಣೇಶ ಸರ್ಕಲ್ನ ಅಂಗಡಿಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು.
ಕಾಮಗಾರಿ ಕೈಗೊಂಡಿದ್ದ ವೇಳೆ ಜಾಗರೂಕತೆ ವಹಿಸದ ಪರಿಣಾಮ ಹಳೆಯ ಒಳಚರಂಡಿ ಪೈಪ್ ಒಡೆಯಿತು. ಪರಿಣಾಮ ರಭಸವಾಗಿ ಕೊಳಚೆ ನೀರು ತಗ್ಗು ಪ್ರದೇಶದಲ್ಲಿದ್ದ ಸುಮಾರು 12 ಅಂಗಡಿಗಳಿಗೆ ನುಗ್ಗಿತು. ನೀರು ಒಮ್ಮೆಲೆ ನುಗ್ಗಿದ ಪರಿಣಾಮ ಏನಾಗುತ್ತದೆ ಎಂದು ತಿಳಿಯದಾದ ಅಂಗಡಿಯಲ್ಲಿದ್ದ ಜನ ಹೊರಗೆ ಓಡಿ ಬಂದರು. ಮೊಳಕಾಲಿನ ವರೆಗೆ ನೀರು ನಿಂತಿದ್ದರಿಂದ ಅಂಗಡಿಯಲ್ಲಿದ್ದ ಸಾಮಗ್ರಿಗಳು ಹಾಳಾದವು. ಅಂಗಡಿಕಾರರು ಕಾಮಗಾರಿ ಕೈಗೊಂಡಿದ್ದವರಿಗೆ ಹಿಡಿಶಾಪ ಹಾಕಿದರು. ಬಳಿಕ ರಸ್ತೆ ತಡೆ ನಡೆಸಿ ಶಾಸಕ ಪ್ರಸಾದ ಅಬ್ಬಯ್ಯ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಅಬ್ಬಯ್ಯ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.