ಒಳಚರಂಡಿ ಕಾಮಗಾರಿ ಬಗ್ಗೆ ಆಕ್ರೋಶ
ಹುಬ್ಬಳ್ಳಿ: ನಗರದಲ್ಲಿ ಆಮೆಗತಿಯಲ್ಲಿ ಸಾಗಿರುವ ಒಳಚರಂಡಿ ಪೈಪ್ಲೈನ್ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಶಾಸಕ ಪ್ರಸಾದ ಅಬ್ಬಯ್ಯ, ಕಾಮಗಾರಿ ಕೈಗೆತ್ತಿಕೊಂಡಿರುವ ಈಗಲ್ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಬೆಳಗ್ಗೆ ದಿಢೀರ್ನೆ ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಸ್ಟೇಶನ್ ರಸ್ತೆಗೆ ಭೇಟಿ ನೀಡಿದ ಶಾಸಕ ಅಬ್ಬಯ್ಯ, ಅಧಿಕಾರಿಗಳಿಂದ ಕಾಮಗಾರಿಯ ಮಾಹಿತಿ ಪಡೆದರು. ಇದೇ ವೇಳೆ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ, ಕಾಮಗಾರಿ ಕೈಗೊಳ್ಳುವ ಮುನ್ನ ಮುಂಜಾಗ್ರತೆ ಕೈಗೊಳ್ಳದಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ಶಾಸಕರನ್ನು ಭೇಟಿ ಮಾಡಿದ ನಿವಾಸಿಗಳು, ಕಾಮಗಾರಿಯಿಂದಾಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಬ್ಬಯ್ಯ, ಮುಂದಿನ ವಾರ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ಕರೆದು ತೊಂದರೆ ದೂರ ಮಾಡುವುದಾಗಿ ತಿಳಿಸಿದರು. ರಾಜಶೇಖರ ಮೆಣಸಿನಕಾಯಿ, ಯಮನೂರ ಜಾಧವ, ಪ್ರಕಾಶ ಬುರಬುರೆ ಇದ್ದರು.