ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿಗದಿಯಲ್ಲಿ ಅಗಿ ಹಬ್ಬದಾಚರಣೆ

Mainashree
Updated On : 23 Jul 2013, 11:14 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 22
ಕಳೆದ ಒಂದು ವರ್ಷದಲ್ಲಿ ತಮ್ಮ ತಮ್ಮ ಹೊಲಗಳ ಬದುವಿನಲ್ಲಿ 18 ಸಾವಿರ ತರಹೇವಾರಿ ಕಾಡು ಗಿಡಗಳನ್ನು ನೆಟ್ಟ ಪ್ರಯುಕ್ತ ತಾಲೂಕಿನ ನಿಗದಿ ಬಳಿ ಹೊಲವೊಂದರಲ್ಲಿ ಸೋಮವಾರ ಅಗಿ ಹಬ್ಬ ಎಂಬ ವಿಶೇಷ ಕಾರ್ಯಕ್ರಮವೊಂದು ನಡೆಯಿತು.
ಇಲ್ಲಿನ ಸ್ಕೋಪ್ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಬೆನಕಹಳ್ಳಿ ಸುಧಾರಣೆ ಸಮಿತಿ ಜಂಟಿಯಾಗಿ ನಿಗದಿ ಬಳಿ ಮಲ್ಲಪ್ಪ, ಫಕ್ಕೀರಪ್ಪ ಹಾಗೂ ಸಂಗಪ್ಪ ಬಾಡದ ಅವರ ಹೊಲದಲ್ಲಿ ಹಮ್ಮಿಕೊಂಡಿದ್ದ ಅಗಿ ಹಬ್ಬದ ಸಮಾರಂಭದಲ್ಲಿ ಧಾರವಾಡ ತಾಲೂಕಿನ ಬೆನಕಟ್ಟಿ, ನಿಗದಿ, ಮುಗದ, ಮಂಡಿಹಾಳ ಹಾಗೂ ಕಲಘಟಗಿ ತಾಲೂಕಿನ ಸೂರಶೆಟ್ಟಿ ಕೊಪ್ಪದ ಸುಮಾರು 400 ರೈತರು ಮತ್ತೆ 500 ಕಾಡು ಗಿಡಗಳನ್ನು ಹೊಲದ ಬದವಿನಲ್ಲಿ ನೆಟ್ಟರು.  
ಅರಣ್ಯ ಇಲಾಖೆ ಸಂಶೋಧನೆ ವಿಭಾಗದ ಸಂರಕ್ಷಣಾಧಿಕಾರಿ ಮನೋಜ ಕುಮಾರ ಮಾತನಾಡಿ, ಹುಟ್ಟಿನಿಂದ ಮರಣದ ಅವಧಿಯವರೆಗೂ ಗಿಡಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಿಡ-ಮರಗಳಿಲ್ಲದೇ ಮನುಷ್ಯನಿಲ್ಲ. ಆದರೆ, ಇಂತಹ ಗಿಡಗಳನ್ನೇ ಇಂದು ಮನುಷ್ಯ ಕ್ರೂರಿಯಂತೆ ಕಡಿಯುತ್ತಿದ್ದಾನೆ. ಇದರಿಂದ ಪರಿಸರ ಹಾಳಾಗುತ್ತಿದ್ದು, ದಿನದಿಂದ ದಿನಕ್ಕೆ ಪರಿಸರ ತನ್ನ ಸಮತೋಲನ ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರೈತರೆಲ್ಲರೂ ಒಟ್ಟಾಗಿ ಸಮಗ್ರ ಕೃಷಿ ಮೂಲಕ ಕಾಡು ಗಿಡಗಳನ್ನು ನೆಡುತ್ತಿರುವುದು ಹಾಗೂ ಅವುಗಳನ್ನು ಪೋಷಿಸುತ್ತಿರುವು ಶ್ಲಾಘನೀಯ ಎಂದರು.
ಸ್ಕೋಪ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರಕಾಶ ಭಟ್, ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಅಥವಾ ನಮಗೆ ಒಳ್ಳೆಯ ಕೆಲಸ ಸಿಗಲಿ ಹೀಗೆ ವಿವಿಧ ಕಾರಣಗಳಿಗೆ ದೇವರಲ್ಲಿ ಪ್ರತಿಜ್ಞೆ ಹಾಗೂ ವ್ರತ ಮಾಡುತ್ತಾರೆ. ಅಂತೆಯೇ, ಪ್ರತಿ ಗ್ರಾಮದ ಜನತೆ ತಮ್ಮ ಹೊಲಗಳಲ್ಲಿ ವರ್ಷಕ್ಕೆ ಕನಿಷ್ಠ ಹತ್ತು ಗಿಡಗಳನ್ನು ನೆಡಬೇಕೆಂದು ವ್ರತ ಮಾಡಬೇಕು. ಹಸಿರು ಕಂಕಣವನ್ನು ಕಟ್ಟಿಕೊಂಡು ಗಿಡ ನೆಡುವ ಮೂಲಕ ಅವುಗಳ ರಕ್ಷಣೆ ಮಾಡಿದಷ್ಟು ಪವಿತ್ರ ಕೆಲಸ ಯಾವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಸ್ಕೋಪ್ ಸಂಸ್ಥೆಯು ಅರಣ್ಯ ಇಲಾಖೆ ಸಹಕಾರದಿಂದ ಕಾಡು ಗಿಡಗಳನ್ನು ನೆಡುತ್ತಿದ್ದು, ಈಗಾಗಲೇ ಸಾವಿರಾರು ಗಿಡಗಳು ಆಳೆತ್ತರಕ್ಕೆ ಬೆಳೆದಿವೆ. ಮುಂದಿನ ವರ್ಷದಲ್ಲಿ ಸುಮಾರು 45 ಸಾವಿರ ಮತ್ತಷ್ಟು ಗಿಡಗಳನ್ನು ನೆಡುವ ಗುರಿ ಇಡಲಾಗಿದೆ ಎಂದರು.
ರೈತರ ಬದುವುಗಳಲ್ಲಿ ಚಗುಚಿ, ಸುಬಾಬುಲ್, ನೆಲ್ಲಿ, ನುಗ್ಗೆ, ನೇರಳೆ, ಗೋಡಂಬಿ, ಬೇವು, ಹೊಂಗೆ, ಸಾಗವಾನಿ, ಅಕೇಷಿಯಾ ಸೇರಿದಂತೆ ಅನೇಕ ಜಾತಿಯ ಗಿಡಗಳನ್ನು ನೆಡಲಾಗಿದೆ. ಬರೀ ಗಿಡಗಳನ್ನು ನೆಡುವುದಲ್ಲದೇ ರೈತರು ತಮ್ಮ ತಮ್ಮ ಗಿಡಗಳನ್ನು ಸಂರಕ್ಷಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಅವರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂದು ಹೇಳಿದರು.
ವನದೇವತೆ ಪೂಜೆ ಹಾಗೂ ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಹಬ್ಬದೂಟದೊಂದಿಗೆ ಸಮಾರಂಭ ಸಮಾಪ್ತಿಯಾಯಿತು.
c

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement