ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಭಾವಿಗಳಿಗೆ ಮಾತ್ರ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ

Mainashree
Updated On : 23 Jul 2013, 11:13 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 22
ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ರಾಜ್ಯ ಬಿಜೆಪಿ ಇದೀಗ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಗೊಳಿಸಲು ರಣತಂತ್ರ ರೂಪಿಸಿದೆ. ಪಕ್ಷದ ರಾಷ್ಟ್ರೀಯ ವರಿಷ್ಠರ ಸೂಚನೆಯ ಮೇರೆಗೆ, ಮಾಜಿ ಸಚಿವ, ಹಾಲಿ ಶಾಸಕರಂತಹ ಪ್ರಭಾವಿ ವ್ಯಕ್ತಿಗಳನ್ನು ಮಾತ್ರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಣಯಿಸಿದೆ.
ಹೌದು, ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಜಿಲ್ಲಾ ಸಂಘಟನೆಯನ್ನು ಹಗುರವಾಗಿ ಪರಿಗಣಿಸಲು ಸಿದ್ಧವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಜಿಲ್ಲಾ ಸಂಘಟನೆಯನ್ನು ಬಲಗೊಳಿಸಲು ನಿರ್ಲಕ್ಷ್ಯ ತೋರಿದ್ದರಿಂದಲೇ ಪಕ್ಷ ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ಬಿಜೆಪಿ ರಾಷ್ಟ್ರೀಯ ವರಿಷ್ಠರು ಹಾಗೂ ಆರ್‌ಎಸ್‌ಎಸ್ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನೂತನ ಜಿಲ್ಲಾಧ್ಯಕ್ಷರನ್ನು ಅಳೆದು ತೂಗಿ ಆಯ್ಕೆ ಮಾಡಬೇಕೆಂದು ವರಿಷ್ಠ ಮಂಡಳಿ, ರಾಜ್ಯ ಕಮಿಟಿಗೆ ಫರ್ಮಾನು ಹೊರಡಿಸಿದೆ.
ಎಲ್ಲರಿಗೂ ಚಿರಪರಿಚಿತರಾಗಿರುವವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮಂಡಳಿ ತಿಳಿಸಿದೆ. ಜಿಲ್ಲಾಧ್ಯಕ್ಷನಾಗುವ ವ್ಯಕ್ತಿ ಮಾಜಿ ಸಚಿವ, ಶಾಸಕ, ನಿಗಮ ಮಂಡಳಿಯ ಅಧ್ಯಕ್ಷ ಅಥವಾ ಕನಿಷ್ಠ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವವನಾಗಿರಬೇಕು. ಇದಕ್ಕಿಂತ ಕೆಳಹಂತದ ಜವಾಬ್ದಾರಿ ಹೊತ್ತಿರುವ ಅಥವಾ ಹೊಸ ಮುಖವನ್ನು ಪರಿಚಯಿಸುವ ರಿಸ್ಕ್ ತೆಗೆದುಕೊಳ್ಳಬಾರದು ಎಂದು ವರಿಷ್ಠ ಮಂಡಳಿ ಕಟಾಜ್ಞೆ ಹೊರಡಿಸಿದೆ.
ಕೋರ್ ಕಮಿಟಿ ನಿರ್ಣಯ: ಈ ಹಿಂದೆ ಶಾಸಕರು ಅಥವಾ ರಾಜ್ಯ ಮುಖಂಡರಲ್ಲಿ ಪ್ರಭಾವಿಯೊಬ್ಬರು ಸೂಚಿಸುವ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವ ಸಂಪ್ರದಾಯ ಬಿಜೆಪಿಯಲ್ಲಿತ್ತು. ಆದರೆ, ಈ ಬಾರಿ ಅಂತಹ ಸಂಪ್ರದಾಯ ಮುರಿಯಲಾಗಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿಯೇ ಜಿಲ್ಲಾಧ್ಯಕ್ಷರು ಯಾರಾಗಬೇಕೆಂಬ ನಿರ್ಣಯ ತೆಗೆದುಕೊಳ್ಳುತ್ತದೆ. ಈ ವಿಷಯವನ್ನು ಶಾಸಕರಾಗಲಿ ಮತ್ಯಾರು ಪ್ರಶ್ನಿಸುವಂತಿಲ್ಲ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ರಾಜ್ಯ ಪದಾಧಿಕಾರಿಯಾಗಿದ್ದವರನ್ನೂ ಕೆಳಗಿಳಿಸಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಕೆಲ ಜಿಲ್ಲೆಗಳಿಗೆ ಬಿಜೆಪಿ ರಾಜ್ಯ ಕೋರ್ ಕಮಿಟಿ ನೇಮಕ ಮಾಡಿದೆ.
ಪ್ರಭಾವಿಗಳಿಗೆ ಪಟ್ಟ: ಈಗಾಗಲೇ ಕೆಲ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಪಕ್ಷ ನೇಮಕ ಮಾಡಿದ್ದು ಅವರೆಲ್ಲರೂ ಪ್ರಭಾವಿ ಸ್ಥಾನ ನಿರ್ವಹಿಸಿದವರೇ ಆಗಿದ್ದಾರೆ. ಗದಗ ಜಿಲ್ಲೆಗೆ ಮಾಜಿ ಸಚಿವ ಕಳಕಪ್ಪ ಬಂಡಿ, ಕೊಪ್ಪಳದಲ್ಲಿ ಮಾಜಿ ಸಚಿವ ಸಂಗಣ್ಣ ಕರಡಿ, ಬಿಜಾಪುರದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಾಗಲಕೋಟೆಯಲ್ಲಿ ವಿಪ ಸದಸ್ಯ ರಾಜಶೇಖರ ಶೀಲವಂತರ, ರಾಜ್ಯಸಭೆ ಸದಸ್ಯರಾಗಿರುವ ಆಯನೂರ ಮಂಜುನಾಥ ಅವರನ್ನು ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ, ಮಾರುತಿ ಪವಾರ ಅವರನ್ನು ಮೈಸೂರು ಜಿಲ್ಲಾಧ್ಯಕ್ಷರನ್ನಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಭೋಜರಾಜ ಅವರನ್ನು ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ಪಕ್ಷ ನೇಮಕ ಮಾಡಿದೆ. ಮುಂದಿನ ಹಂತದಲ್ಲಿ ನಾನಾ ಜಿಲ್ಲೆಗಳಲ್ಲಿಯೂ ಇದೇ ರೀತಿಯಾಗಿ ನೇಮಕ ಪ್ರಕ್ರಿಯೆ ಕೈಗೊಳ್ಳಲಿದೆ.
ಚುನಾವಣೆ ತಯಾರಿ: ಪ್ರಭಾವಿಗಳನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸುವುದರಿಂದ ಸಂಘಟನೆ ಬಲಗೊಳ್ಳುತ್ತದೆ. ಇದೇ ವೇಳೆ ಜಿಲ್ಲಾಧ್ಯಕ್ಷರ ಮಾತಿಗೆ ಕಾರ್ಯಕರ್ತರು ಮನ್ನಣೆ ನೀಡುತ್ತಾರೆ. ಪಕ್ಷದಲ್ಲಿ ಎದುರಾಗುವ ತೊಂದರೆಗಳನ್ನು ನಿಭಾಯಿಸಲು ಇಂಥವರು ಸಮರ್ಥರಾಗಿರುತ್ತಾರೆಂಬುದು ಪಕ್ಷದ ಪ್ರಮುಖರ ಅಭಿಪ್ರಾಯ. ಇವೆಲ್ಲದರ ಜತೆಗೆ ಎದುರಾಗಲಿರುವ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕು, ವಿಧಾನಸಭೆ ಚುನಾವಣೆಯಲ್ಲಿ ಹೋದ ಮಾನ ಮರಳಿ ಪಡೆಯಬೇಕೆಂಬ ಉದ್ದೇಶದಿಂದ ಬಿಜೆಪಿ ಸಂಘಟನೆಯ ವಿಷಯದಲ್ಲಿ ಇಂತಹ ನಿರ್ಣಯಕ್ಕೆ ಬಂದಂತಿದೆ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement