ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆರ್‌ಬಿಐ ವಿರುದ್ಧ ಕೋರ್ಟ್ ಮೊರೆ

Mainashree
Updated On : 25 Jul 2013, 11:15 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 24
ಹುಬ್ಬಳ್ಳಿಯ ಗುರುಸಿದ್ದೇಶ್ವರ ಬ್ಯಾಂಕ್ ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಸುಸ್ತಿ ಸಾಲ ಮನ್ನಾ ಯೋಜನೆಯಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ. ಸಹಕಾರಿ ಇಲಾಖೆ ಹಾಗೂ ರಿಸರ್ವ್ ಬ್ಯಾಂಕ್ ಸೂಕ್ತ ಮಾರ್ಗದರ್ಶನ ನೀಡದ್ದರಿಂದ ಎಲ್ಲ ಗೊಂದಲಗಳು ತಲೆ ಎತ್ತಿವೆ. ಆರ್‌ಬಿಐ ನಿರ್ದೇಶನದ ಮೇರೆಗೆ ಬ್ಯಾಂಕ್ ಹಣ ಮರು ಪಾವತಿ ಮಾಡಿದಾಗಲೂ ಸಹಕಾರಿ ಇಲಾಖೆ ಬ್ಯಾಂಕ್ ವಿರುದ್ಧ ದೂರ ದಾಖಲಿಸಿರುವುದು ಖಂಡನೀಯ. ಇದರಿಂದಾಗಿ ಸಹಕಾರಿ ಇಲಾಖೆ ಹಾಗೂ ಆರ್‌ಬಿಐ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಲು ಚಿಂತಿಸುತ್ತಿರುವುದಾಗಿ ಬ್ಯಾಂಕಿನ ಶೇರುದಾರರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯ ಸಂಕೇಶ್ವರ ಮತ್ತು ಮೋಹನ ಲಿಂಬಿಕಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಸ್ತಿ ಸಾಲ ಮನ್ನಾ ಯೋಜನೆಯಲ್ಲಿ ಗುರುಸಿದ್ದೇಶ್ವರ ಬ್ಯಾಂಕ್ ನಯಾ ಪೈಸೆ ಅವ್ಯವಹಾರ ನಡೆಸಿಲ್ಲ. ಆದಾಗ್ಯೂ ಸುಖಾಸುಮ್ಮನೆ ಬ್ಯಾಂಕ್ ಮೇಲೆ ಗೂಬೆ ಕೂರಿಸಲಾಗಿದೆ. ಆರ್‌ಬಿಐ ಹಾಗೂ ಸಹಕಾರ ಇಲಾಖೆ ಮಾಡಿದ ತಪ್ಪಿನಿಂದಾಗಿ ಬ್ಯಾಂಕ್ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಗುರುಸಿದ್ದೇಶ್ವರ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದೇ ಇಲ್ಲ. ಒಂದು ವೇಳೆ ಅಂತಹ ಸಂಶಯವಿದ್ದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.
ರಾಜ್ಯದಲ್ಲಿನ 77 ಸಹಕಾರಿ ಬ್ಯಾಂಕ್‌ಗಳು ರೈತರ ಸುಸ್ತಿ ಸಾಲ ಮನ್ನಾ ಯೋಜನೆಯ ಲಾಭ ಪಡೆದಿವೆ. ಗುರುಸಿದ್ದೇಶ್ವರ ಬ್ಯಾಂಕ್‌ನಲ್ಲಿ ನಡೆದಿರುವ ಅಚಾತುರ್ಯ ಎಲ್ಲ ಬ್ಯಾಂಕುಗಳಲ್ಲಿಯೂ ನಡೆದಿದೆ. ಹೀಗಿದ್ದಾಗ ಸಹಕಾರ ಇಲಾಖೆ ಹಾಗೂ ಆರ್‌ಬಿಐ ಮಾಡಿದ ತಪ್ಪಿಗೆ ಗುರುಸಿದ್ದೇಶ್ವರ ಬ್ಯಾಂಕಿಗೆ ಮಾತ್ರ ದಂಡವೇಕೆ? ಎಲ್ಲ ಬ್ಯಾಂಕ್‌ಗಳಲ್ಲಿಯೂ ತನಿಖೆ ನಡೆಸಲಿ ಎಂದು ಸಂಕೇಶ್ವರ ಹಾಗೂ ಲಿಂಬಿಕಾಯಿ ಒತ್ತಾಯಿಸಿದರು.
ಗುರುಸಿದ್ದೇಶ್ವರ ಬ್ಯಾಂಕ್ ಸುಸ್ತಿ ಸಾಲ ಯೋಜನೆಯಲ್ಲಿ ಅವ್ಯವಹಾರ ನಡೆಸಿದೆ ಎಂಬ ಮಾತಿನಲ್ಲಿ ಹುರುಳಿಲ್ಲ. 2007-08ನೇ ಸಾಲಿನಲ್ಲಿ ಯೋಜನೆ ಘೋಷಿಸಿದಾಗ ಆರ್‌ಬಿಐ ಬ್ಯಾಂಕಿಗೆ ಪತ್ರ ಬರೆದು ಮಾಹಿತಿ ಕೇಳಿತ್ತು. ಬಳಿಕ ಬ್ಯಾಂಕ್ 1390 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಆರ್‌ಬಿಐಗೆ ರವಾನಿಸಿತು. ತದ ನಂತರ 2009ರಲ್ಲಿ ರು. 5.30 ಕೋಟಿ ಮೊತ್ತ ಮಂಜೂರಿ ಮಾಡಿತು. ಈ ಸಾಲದ ಸಬ್ಸಿಡಿಯನ್ನು ಬ್ಯಾಂಕ್ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಮಾಡಿತು. ಹೀಗಿದ್ದಾಗ ಈ ವ್ಯವಹಾರದಲ್ಲಿ ಗೋಲ್‌ಮಾಲ್ ಮಾಡುವ ಪ್ರಶ್ನೆಯೇ ಇಲ್ಲ. 1390 ಫಲಾನುಭವಿಗಳ ಪಟ್ಟಿಯನ್ನು ಸ್ವತಃ ಆರ್‌ಬಿಐ ಹಾಗೂ ಸಹಕಾರ ಇಲಾಖೆ ಮನ್ನಿಸಿದೆ. ಇದಾದ ಬಳಿಕ ಸಹಕಾರ ಇಲಾಖೆ ಹಾಗೂ ಆರ್‌ಬಿಐ ಸತತ ಮೂರು ವರ್ಷಗಳ ಕಾಲ ಆಡಿಟ್ ಕೂಡ ಮಾಡಿದೆ. ಆಗ ಯಾವುದೇ ಅಪಸ್ವರವೆದ್ದಿರಲಿಲ್ಲ.
ಇದೀಗ 2011ರಲ್ಲಿ ಸಿಎಜಿ ದೇಶಾದ್ಯಂತ ಕೃಷಿ ಸಾಲ ಮನ್ನಾ ಯೋಜನೆಯ ವ್ಯವಹಾರಗಳ ಕುರಿತು ರ್ಯಾಂಡಮ್ ಪರಿಶೀಲನೆಗೆ ಸೂಚಿಸಿ ಆಡಿಟ್ ಮಾಡಿದೆ. ರಾಜ್ಯದ 77 ಬ್ಯಾಂಕ್‌ಗಳ ಪೈಕಿ 5 ಬ್ಯಾಂಕ್‌ಗಳನ್ನು ಆಯ್ದುಕೊಂಡಿದೆ, ಆ ಪೈಕಿ ಗುರುಸಿದ್ದೇಶ್ವರ ಬ್ಯಾಂಕ್ ಕೂಡ ಸೇರಿದೆ. ಸಿಎಜಿ ಆಡಿಟ್ ನಂತರ ಯೋಜನೆ ಅನುಷ್ಠಾನದಲ್ಲಿ ಪ್ರೊಸಿಜರ್ ಲ್ಯಾಪ್ಸ್ ಆಗಿದೆ ಎಂದು ತಿಳಿಸಿದೆ. ತದನಂತರ ಬೆಂಗಳೂರಿನಲ್ಲಿ ಆರ್‌ಬಿಐ ಅಧಿಕಾರಿಗಳು 26 ಜೂನ್ 2013ರಂದು ಸಭೆ ನಡೆಸಿ ಹಣ ಮರುಪಾವತಿಗೆ ಸೂಚಿಸಿದರು. ಬ್ಯಾಂಕ್ ಎರಡು ಕಂತಿನಲ್ಲಿ ರು. 4.19 ಕೋಟಿ ಆರ್‌ಬಿಐಗೆ ಮರುಪಾವತಿ ಮಾಡಿದೆ. ಹೀಗಿರುವಾಗ ಬ್ಯಾಂಕ್ ಯೋಜನೆಯ ಹಣ ಗುಳುಂ ಮಾಡಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದರು.
ಈಗ ಅನವಶ್ಯಕವಾಗಿ ಬ್ಯಾಂಕ್ ಆಡಳಿತ ಮಂಡಳಿಯ ಮೇಲೆ ದೂರು ಸಲ್ಲಿಸಿರುವ ಸಹಕಾರಿ ನಿಬಂಧಕರು ಈ ಹಿಂದೆ ಆಡಿಟ್ ಮಾಡಿದ ಹಾಗೂ ಫಲಾನುಭವಿಗಳ ಪಟ್ಟಿ ಅಂಗೀಕರಿಸಿ ಆರ್‌ಬಿಐ ಹಾಗೂ ಸಹಕಾರಿ ಅಧಿಕಾರಿಗಳನ್ನು ಮರೆ ಮಾಚಿದ್ದಾರೆ. ಇವರು ವಿರುದ್ಧವೂ ಕ್ರಮಕ್ಕೆ ಮುಂದಾಗಲಿ ಎಂದು ಸಂಕೇಶ್ವರ ಹಾಗೂ ಲಿಂಬಿಕಾಯಿ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement