ಜಿಲ್ಲಾಧ್ಯಕ್ಷ ಪಟ್ಟ ಬೇಡ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿರುವ ಬೆನ್ನಲ್ಲೇ ತಾವು ಜಿಲ್ಲಾಧ್ಯಕ್ಷರಾಗಲು ಸಿದ್ಧರಿಲ್ಲ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿಯೇ ಪಕ್ಷ ಸಂಘಟನೆಯ ಕಾರ್ಯ ಮಾಡುವುದಾಗಿ ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ಪಕ್ಷದ ವರಿಷ್ಠರು ಆಶಯ ವ್ಯಕ್ತ ಪಡಿಸಿದ್ದಾಗ ನಾನು ನಿರಾಕರಿಸಿದ್ದೇನೆ. ಇದೀಗ ಮಹಾನಗರ ಜಿಲ್ಲಾಧ್ಯಕ್ಷರಾಗುವ ವಿಷಯದಲ್ಲಿಯೂ ನನ್ನದು ಇದೇ ನಿಲುವು. ನನ್ನನ್ನು ಅಧ್ಯಕ್ಷರನ್ನಾಗಿಸುವ ಬದಲು ಆಸಕ್ತರು ಅದರಲ್ಲಿಯೂ ಹೊಸಬರಿಗೆ ಆದ್ಯತೆ ನೀಡಲಿ ಎಂಬುದು ನನ್ನ ಬಯಕೆ. ಹೊಸಬರಿಗೆ ಆದ್ಯತೆ ನೀಡುವುದರಿಂದ ಪಕ್ಷದ ಸಂಘಟನೆ ಬಲಗೊಳ್ಳಲು ಸಾಧ್ಯವಾಗುತ್ತದೆ. ಬಿಜೆಪಿ ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನದ ಹೊರತಾಗಿ ಪಕ್ಷ ನೀಡುವ ಇನ್ನಾವುದೇ ಜವಾಬ್ದಾರಿ ಹೊರಲು ಸಿದ್ಧ. ಸಾಮಾನ್ಯ ಕಾರ್ಯಕರ್ತನಾಗಿದ್ದುಕೊಂಡೇ ಪಕ್ಷ ಬೆಳೆಸುವ ಕಾಯಕ ಮಾಡುತ್ತೇನೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸುತ್ತೇನೆ. ಹೀಗಾಗಿ ಜಿಲ್ಲಾಧ್ಯಕ್ಷ ಪಟ್ಟ ತಮಗೆ ಬೇಡ ಎಂದು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಶಂಕರ ಪಾಟೀಲ ಮುನೇನಕೊಪ್ಪ ತಿಳಿದ್ದಾರೆ.