ಸುದ್ದಿ ಸಂಕ್ಷೇಪ
ಬೈಕ್ ಕಳ್ಳತನ
ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಆಯೋಧ್ಯಾ ನಗರದ ನಿವಾಸಿಯೊಬ್ಬರ ಬೈಕ್ ಕಳ್ಳತನವಾಗಿದೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಯೋಧ್ಯಾ ನಗರದ ಸೈಯದ್ ಅಲಿಯಾಸ್ ಮಹ್ಮದಷಾ ಜೋಪಡಿ ಅವರು ಆಯೋಧ್ಯಾ ನಗರ ಮಸೀದಿ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ.
ಎಟಿಎಂ ಕಳ್ಳತನಕ್ಕೆ ಯತ್ನ
ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ್ರೋಡ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಟಿಎಂ ಮುರಿದು ನಗದು ದೋಚುವುದಕ್ಕೆ ಮಂಗಳವಾರ ರಾತ್ರಿ ಕಳ್ಳರು ಯತ್ನಿಸಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಉದ್ಯೋಗಿ ಮಂಜುನಾಥ ಚಂದ್ರಶೇಖರ ಕುಮಾಟಕಾರ್ ದೂರು ನೀಡಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಜೂಜಾಟ: ಓರ್ವನ ಸೆರೆ
ಧಾರವಾಡ: ಜೂಜಾಟದಲ್ಲಿ ತೊಡಗಿದ್ದ ಓರ್ವನನ್ನು ಅಳ್ನಾವರ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಪಟ್ಟಣದ ವಿನಾಯಕ ಅನಂತ ಇಜಾರೆ ಬಂಧಿತನಾಗಿದ್ದು, ರು. 1040 ನಗದು ಮತ್ತು ಮಟಕಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನಿಯಂತ್ರಣ ತಪ್ಪಿ ಅಪಘಾತ
ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಮಹೀಂದ್ರಾ ಟೆಂಪೋವೊಂದು ರಸ್ತೆ ಬದಿಯ ತಗ್ಗಿಗೆ ಉರುಳಿ ಬಿದ್ದ ಘಟನೆ ಕಲಘಟಗಿ ರಸ್ತೆಯಲ್ಲಿನ ಯರಿಕೊಪ್ಪ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಮತ್ತು ಇತರರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳಾಗಿಲ್ಲ. ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆದುಳು ರಕ್ತಸ್ರಾವ ಬಾಲಕಿ ಸಾವು
ಧಾರವಾಡ: ಮೆದುಳು ರಕ್ತಸ್ರಾವದಿಂದ ತಾಲೂಕಿನ ಕಲ್ಲಾಪುರ ಗ್ರಾಮದ ಬಾಲಕಿಯೋರ್ವಳು ಬುಧವಾರ ಮೃತಳಾದ ಘಟನೆ ನಡೆದಿದೆ. ಎಂದಿನಂತೆ ಬುಧವಾರವೂ ಶಾಲೆಗೆ ತೆರಳಿದ 15 ವರ್ಷದ ಅಶ್ವಿನಿಗೆ ವಿಪರೀತ ಬೆನ್ನು ನೋವು ಹಾಗೂ ಕತ್ತಿನ ನೋವು ಕಾಣಿಸಿಕೊಂಡಿದೆ. ಶಿಕ್ಷಕರ ಪರವಾನಗಿ ಪಡೆದು ಮನೆ ತೆರಳಿ ಪಾಲಕರಿಗೆ ತಿಳಿಸಿದಾಗ, ಕೂಡಲೇ 108 ಅಂಬುಲೆನ್ಸ್ ಮೂಲಕ ಧಾರವಾಡದ ಜಿಲ್ಲಾಸ್ಪತ್ರೆಗೆ ಬರುವಷ್ಟರಲ್ಲಿ ಅಶ್ವಿನಿ ಮೃತಳಾಗಿದ್ದಳು. ಆದರೆ, ಅಶ್ವಿನಿ ಬಿಸಿಯೂಟದಿಂದ ಮೃತಪಟ್ಟಿದ್ದಾಳೆಂದು ಕೆಲ ಹೊತ್ತು ಎಲ್ಲೆಡೆ ವದಂತಿ ಹಬ್ಬಿತ್ತು. ಈ ವಿಷಯ ತಿಳಿದು ಕೂಡಲೇ ಗ್ರಾಮೀಣ ಶಿಕ್ಷಣಾಧಿಕಾರಿ ಎಸ್.ಬಿ. ಬಿಂಗೇರಿ ಹಾಗೂ ಡಿವೈಎಸ್ಪಿ ರಾಜು ಬನಹಟ್ಟಿ ವೈದ್ಯರೊಂದಿಗೆ ಸಮಾಲೋಚಿಸಿದರು. ಬಾಲಕಿ ಮಧ್ಯಾಹ್ನ ಬಿಸಿ ಊಟವನ್ನೇ ಮಾಡಿಲ್ಲ. ಅಂಬುಲೆನ್ಸ್ನಲ್ಲಿ ವಾಂತಿ ಮಾಡಿದ್ದು, ಆಕೆ ಬಿಸಿ ಊಟದಿಂದ ಮೃತಳಾಗಿಲ್ಲ, ಮೆದುಳು ರಕ್ತಸ್ರಾವದಿಂದ ಮೃತಳಾಗಿದ್ದಾಳೆಂದು ಪತ್ರಿಕೆಗೆ ಖಚಿತಪಡಿಸಿದರು.
ಕ್ಲರ್ಕ್ಸ್ ಇನ್ನಲ್ಲಿ ಆಹಾರ ಮೇಳ
ಹುಬ್ಬಳ್ಳಿ: ಆಹಾರ ಪ್ರಿಯರಿಗಾಗಿ ವಿಭಿನ್ನ ಆಹಾರ ಮೇಳ ಆಯೋಜಿಸುತ್ತ ಬಂದಿರುವ ಕ್ಲರ್ಕ್ಸ್ ಇನ್ ಹೊಟೇಲ್ ಇದೀಗ ದಾವತ್-ಈ-ಕಬಾಬ್ ಔರ್ ಬಿರಿಯಾನಿ ಆಹಾರ ಮೇಳವನ್ನು ಹಮ್ಮಿಕೊಂಡಿದೆ ಎಂದು ಹೊಟೇಲ್ನ ಪ್ರಧಾನ ವ್ಯವಸ್ಥಾಪಕ ಪುಷ್ಪರಾಜ್ ಮೊಹಾಂತಿ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೆಂಗಾಲಿ, ದಿಲ್ಲಿ ಹಾಟ್, ಚೈನೀಸ್, ರಾಜಸ್ಥಾನಿ, ಕಾಶ್ಮೀರಿ, ಚಕದೇ ಪಂಜಾಬ್ನಂತಹ ವಿವಿಧ ಶೈಲಿಯ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಇದೀಗ ರಂಜಾನ್ ಅಂಗವಾಗಿ ಉತ್ತರ ಪ್ರದೇಶದ ಮೊಘಲ ರಾಜಮನೆತನದ ಪರಂಪರೆಯ ಪ್ರಸಿದ್ಧ ಖಾದ್ಯಗಳನ್ನು ಅವಳಿನಗರದ ಜನತೆಗೆ ಉಣಬಡಿಸಲು ನಿರ್ಧರಿಸಿದೆ ಎಂದರು. ಜು. 26 ರಿಂದ ಆಗಸ್ಟ್ 4ರ ವರೆಗೆ ಮೇಳ ನಡೆಯಲಿದೆ. ಪ್ರತಿದಿನ ಸಂಜೆ 7 ರಿಂದ ಮೇಳ ಆರಂಭವಾಗಲಿದೆ. ಕಬಾಬ್ ಮತ್ತು ಬಿರಿಯಾನಿ, ಗಲವಾಟಿ ಕಬಾಬ್ಸ ತಬಾಕ್ ಮಾಸ್, ಚಪಲಿ ಕಬಾಬ್, ಅಮೃತಸರ್ ತಲ್ಲಿ ಮಚ್ಚಿ, ಮುರ್ಗ ಪೇಶಾವರ್ ತಿಕ್ಕಾ, ಲಖನೌ ಬಿರಿಯಾನಿ, ಕರೇಲಿ ಕಿ ಬಿರಿಯಾನಿ, ರಸಮಲಾಯಿ ಹೇರೆ ಸುಮಾರು 35 ಬಗೆಯ ಖಾದ್ಯಗಳು ಆಹಾರ ಮೇಳದಲ್ಲಿ ದೊರೆಯಲಿವೆ ಎಂದು ತಿಳಿಸಿದರು.