ನಾಳೆ ಸಹಕಾರಿ ಸಂಘ ಉದ್ಘಾಟನೆ, ಸನ್ಮಾನ
ಧಾರವಾಡ: ಇಲ್ಲಿನ ತಾಲೂಕು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ, ಸಾಂಸ್ಕೃತಿಕ ಭವನದ ಅಡಿಗಲ್ಲು ಹಾಗೂ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸನ್ಮಾನ ಸಮಾರಂಭ ಜು. 27ರಂದು ನಡೆಯಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಗುರು ತಿಗಡಿ, 1934ನೇ ಇಸ್ವಿಯಲ್ಲಿ ಹುಟ್ಟಿಕೊಂಡ ಈ ಸಂಘಕ್ಕೆ ಪ್ರಸ್ತುತ 80 ವರ್ಷಗಳು ತುಂಬಿವೆ. ಇಷ್ಟು ವರ್ಷ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರು. 24 ಲಕ್ಷ ವೆಚ್ಚದಲ್ಲಿ ಈಗ 3 ಗುಂಟೆ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. 27ರ ಬೆಳಗ್ಗೆ 11.30ಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಟ್ಟಡ ಉದ್ಘಾಟಿಸುತ್ತಾರೆ. ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಸಂಸದ ಪ್ರಹ್ಲಾದ ಜೋಶಿ ಪುರಸ್ಕಾರ ವಿತರಿಸುತ್ತಿದ್ದು, ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸುತ್ತಾರೆ. ಸಂಘದ ಕಟ್ಟಡಕ್ಕೆ ಜಾಗ ನೀಡಿದ ದಾನಿ ಬಸವಣ್ಣೆವ್ವ ಕಲಘಟಗಿ ಅವರನ್ನು ಸನ್ಮಾನಿಸಲಾಗುವುದು ಎಂದರು. ಸಂಘವು ಆರಂಭದಲ್ಲಿ ಪ್ರತಿ ತಿಂಗಳು ರು. 10 ಶೇರು ಹಣ ಸಂಗ್ರಹಿಸಿ ಗರಿಷ್ಠ ರು. 200 ನೀಡುತ್ತಿದ್ದು, ಪ್ರಸಕ್ತ ರು. 600 ಸಂಗ್ರಹಿಸಿ ರು. 2 ಲಕ್ಷದ ವರೆಗೆ ಸದಸ್ಯರಿಗೆ ಸಾಲ ನೀಡುತ್ತಿದೆ. 2013ರ ಮಾರ್ಚ್ ಅಂತ್ಯಕ್ಕೆ 731 ಸದಸ್ಯರನ್ನು ಹೊಂದಿದ್ದು ರು. 2.60 ಕೋಟಿ ಶೇರು ಬಂಡವಾಳ ಹಾಗೂ ರು. 53.17 ಲಕ್ಷ ಕಾಯ್ದಿಟ್ಟ ನಿಧಿ ಹೊಂದಿದೆ. ಅಲ್ಲದೇ ರು. 4.85 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಾಲ ಸೌಲಭ್ಯ ಸಂಘದ ಉದ್ದೇಶವಲ್ಲ. ಸದಸ್ಯರ ಹಿತಾಸಕ್ತಿ, ಪರಸ್ಪರ ಸಹಾಯ ಸ್ವಾವಲಂಬನೆ ಹಾಗೂ ಇತರೆ ತರಬೇತಿ ಹಮ್ಮಿಕೊಳ್ಳುತ್ತೇವೆ. ಒಟ್ಟಿನಲ್ಲಿ ಪಾರದರ್ಶಕತೆಯಿಂದ ಸಂಘದ ಕಾರ್ಯಚಟುವಟಿಕೆ ನಡೆಯುತ್ತಿವೆ ಎಂದರು. ಸಂಘದ ಕಟ್ಟಡದ ಮೇಲೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಇತರೆ ಸಭೆ-ಸಮಾರಂಭಗಳಿಗೆ ಅನುಕೂಲವಾಗಲು ಸಾಂಸ್ಕೃತಿಕ ಭವನ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರದಿಂದ ರು. 10 ಲಕ್ಷ ಧನ ಸಹಾಯ ಪಡೆಯಲಾಗಿದೆ. ಸಂಘದ ಸದಸ್ಯರು ಪ್ರತಿ ವರ್ಷ ರು. 60 ಕಲ್ಯಾಣ ನಿಧಿ ಯೋಜನೆಯಲ್ಲಿ ದೇಣಿಗೆ ನೀಡುತ್ತಿದ್ದು, ಈ ಹಣದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ಗೌರವ ಧನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಸಿ.ಎಂ. ಕಿತ್ತೂರ, ನಿರ್ದೇಶಕರಾದ ಕೆ.ಎಸ್. ದೊಡವಾಡ, ಆರ್.ಎಂ. ಹೊನ್ನಪ್ಪನವರ, ಎಲ್.ಐ. ಲಕ್ಕಮ್ಮನವರ, ಬಸವರಾಜ ವಾಸನದ, ಚಂದ್ರಶೇಖರ ಸರನಾಯಕ, ವೈ.ಪಿ. ಶಿಂಪಿ, ಗಂಗವ್ವ ಕೋಟಿಗೌಡರ, ಎಸ್.ಎಲ್. ತೋಟಗೇರ ಇದ್ದರು.