ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಸ್ತೆ ಗುಂಡಿ ಮುಚ್ಚಿಸಲು ಜಿಲ್ಲಾಡಳಿತ ಕ್ರಮ

Mainashree
Updated On : 26 Jul 2013, 11:44 am

ಹುಬ್ಬಳ್ಳಿ:  ಅವಳಿ ನಗರದಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಡೆಯುವುದಕ್ಕಾಗಿ ಮ್ಯಾನ್‌ಹೋಲ್, ರಸ್ತೆ ಮಧ್ಯದ ಗುಂಡಿ ಮುಚ್ಚುವ ಜೊತೆಗೆ ದೊಡ್ಡ ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದೆ.
ಇದರೊಂದಿಗೆ ಅವಳಿ ನಗರ ಮಧ್ಯದ ಬಿಆರ್‌ಟಿಎಸ್ ರಸ್ತೆ ನಿರ್ಮಾಣ ಕಾಮಗಾರಿ ನಿಧಾನಗತಿಯಿಂದ ಹಾಗೂ ಬೃಹತ್ ಒಳಚರಂಡಿ ಕಾಮಗಾರಿಯಿಂದ ಸಂಚಾರಕ್ಕೆ ಆಗುತ್ತಿರುವ ತೊಂದರೆ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಧಿಕಾರಿ ಸಮೀರ ಶುಕ್ಲಾ ನೀಡಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ನಿರ್ಮಾಣ ಹಂತದಲ್ಲಿರುವ ಬಿಆರ್‌ಟಿಎಸ್ ರಸ್ತೆ ಮೇಲೆ ವಾಹನಗಳು ಸರಳವಾಗಿ ಸಂಚರಿಸುವಂತೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು. ಅವಳಿ ನಗರ ಮಧ್ಯದ ಕೆಲವೆಡೆ ವಾಹನಗಳು ಸಂಚರಿಸದಂಥ ಪರಿಸ್ಥಿತಿ ಉದ್ಭವಿಸಿದೆ. ಈ ರಸ್ತೆ ಮೇಲ್ಮೈ ನಿರ್ಮಾಣಕ್ಕೂ ಮುಂಚಿನ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳ್ಳಲಿದ್ದು, ನಂತರ ವಾಹನಗಳು ಸುಗಮವಾಗಿ ಸಂಚರಿಸಬಹುದು ಎಂದರು.
ನಗರದಲ್ಲಿ ನಡೆದಿರುವ ಬೃಹತ್ ಒಳಚರಂಡಿ ನಿರ್ಮಾಣ ಕಾಮಗಾರಿಯಿಂದ ರಸ್ತೆಗಳು ಹದಗೆಟ್ಟು ಹೋಗಿವೆ. ಕಾಮಗಾರಿ ನಿಧಾನಗತಿಯಿಂದ ನಾಗರಿಕರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ರಸ್ತೆ ಕಿತ್ತಿರುವ ಸ್ಥಳದಲ್ಲಿ ಮರು ಡಾಂಬರೀಕರಣ ಮಾಡಬೇಕಿತ್ತು. ತಕ್ಷಣ ಹೆಚ್ಚಿನ ಕಾರ್ಮಿಕರನ್ನು ಬಳಸಿ, ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ.
ವಾರದಲ್ಲಿ 2 ಬಾರಿ ಪರಿಶೀಲನೆ: ಕಾಮಗಾರಿ ವೇಗ ಹೆಚ್ಚಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ಗುರುವಾರ ತಾವು ಹಾಗೂ ಮಂಗಳವಾರ ಪಾಲಿಕೆ ಆಯುಕ್ತರು ಕಾಮಗಾರಿಯನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಒಟ್ಟು 96 ಕಿ.ಮೀ. ಉದ್ದದ ಈ ಒಳಚರಂಡಿ ನಿರ್ಮಾಣ ಕಾಮಗಾರಿ ಇದುವರೆಗೆ 77.5 ಕಿ.ಮೀ.ವರೆಗೆ ಪೂರ್ಣಗೊಂಡಿದೆ. ಇನ್ನೂ 20.5 ಕಿ.ಮೀ. ಉದ್ದದ ಕಾಮಗಾರಿ ನಡೆಯಬೇಕಿದೆ. 2014ರೊಳಗೆ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕು. ಬೃಹತ್ ಒಳ ಚರಂಡಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದಕ್ಕಾಗಿ ಗುತ್ತಿಗೆದಾರರಿಗೆ ರು. 30 ಲಕ್ಷ ದಂಡ ವಿಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 174 ಹೊಸ ಮ್ಯಾನ್‌ಹೋಲ್‌ಗಳನ್ನು ಹಾಕಲಾಗಿದೆ. ಮ್ಯಾನ್‌ಹೋಲ್ ಕಿತ್ತುಹೋದಲ್ಲಿ ತಕ್ಷಣ ಹೊಸತನ್ನು ಹಾಕಲಾಗುವುದು. ಕೆಲವೆಡೆ ಚರಂಡಿ ಮೇಲ್ಮೈ ಕಿತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಮಳೆಗಾಲದ ಸಂದರ್ಭದಲ್ಲಿ ಚರಂಡಿ ಮೇಲ್ಮೈ ಕೀಳುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಒಂದು ವಾರದೊಳಗೆ ಕಿತ್ತಿರುವ ಚರಂಡಿ ಮೇಲ್ಮೈ ನಿರ್ಮಿಸಲಾಗುವುದು.
ರು. 44 ಲಕ್ಷ ಮೀಸಲು: ಮಳೆಯಿಂದಾಗಿ ರಸ್ತೆ ಮಧ್ಯೆ ತಗ್ಗುಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆ ಮಧ್ಯದ ತಗ್ಗುಗಳನ್ನು ಮುಚ್ಚಲು ರು. 44 ಲಕ್ಷ ಮೀಸಲಿರಿಸಲಾಗಿದೆ. ಮಳೆ ಸುರಿಯುವುದು ತಟಸ್ಥಗೊಂಡಲ್ಲಿ ಒಂದು ವಾರದೊಳಗೆ ರಸ್ತೆ ಮಧ್ಯದ ತಗ್ಗುಗಳನ್ನು ಮುಚ್ಚಲಾಗುವುದು. ಅವಳಿ ನಗರದಲ್ಲಿರುವ ಮಣ್ಣಿನ ರಸ್ತೆಗಳನ್ನು ಪಟ್ಟಿ ಮಾಡಿ, ಒಂದು ವಾರದೊಳಗೆ ಈ ರಸ್ತೆಗಳನ್ನು ಮೆಟಲಿಂಗ್ ಮಾಡಲಾಗುವುದು. ಕಳೆದ 40-50 ವರ್ಷಗಳಿಂದ ಸ್ವಚ್ಛಗೊಳಿಸದ ಕೆಲ ದೊಡ್ಡ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು. ರಸ್ತೆ ಪಕ್ಕದ ಚರಂಡಿ ಸ್ವಚ್ಛಗೊಳಿಸುವಂತೆ ಪಾಲಿಕೆ ವಲಯ ಸಹಾಯಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಸ್ವಚ್ಛಗೊಳಿಸಿರುವ ಚರಂಡಿಗಳ ವಿವರವನ್ನು ಪ್ರತಿ ವಾರ ನೀಡುವಂತೆ ನಿರ್ದೇಶನ ನೀಡಲಾಗಿದ್ದು, ಸ್ವಚ್ಛಗೊಳಿಸಿರುವ ಚರಂಡಿಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ತಿಳಿಸಿದರು. ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರು ಬೃಹತ್ ಒಳ ಚರಂಡಿ ಕಾಮಗಾರಿ ನಡೆದಿರುವ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement