ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 26 Jul 2013, 11:45 am

ನಾಳೆ ರಂಗ ಪ್ರವೇಶ
ಧಾರವಾಡ:
ಭರತನಾಟ್ಯ ಕಿರಿಯ, ಹಿರಿಯ ಪರೀಕ್ಷೆಗಳಲ್ಲಿ ಅತ್ಯುನ್ನತ ಮಟ್ಟದಲ್ಲಿ ಉತ್ತೀರ್ಣರಾದ, ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರತಿಭಾ ವಿದ್ಯಾರ್ಥಿ ವೇತನ ಗಳಿಸಿದ ಇಲ್ಲಿನ ಡಾ. ಸದಾನಂದ ಜೋಶಿ ಹಾಗೂ ಡಾ. ಸ್ನೇಹಾ ಜೋಶಿ ಅವರ ಪುತ್ರಿ ಶ್ರೀರಕ್ಷಾ ಜೋಶಿ ಅವರ ಭರತನಾಟ್ಯ ರಂಗ ಪ್ರವೇಶ ಜು. 27ರಂದು ನಡೆಯಲಿದೆ. ನೂಪುರ ಕಲಾವಿದರ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಉಪಾಧ್ಯೆ ನೃತ್ಯವಿಹಾರ ಜಂಟಿಯಾಗಿ ವಿದ್ಯಾವರ್ಧಕ ಸಂಘದಲ್ಲಿ ಸಂಜೆ 5ಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶ್ರೀರಕ್ಷಾಗೆ ವಿದ್ವಾನ್ ಪ್ರೊ. ಕೆ. ರಾಮಮೂರ್ತಿರಾವ್ ಮಾರ್ಗದರ್ಶನ ನೀಡಿದ್ದಾರೆ. ಸಮಾರಂಭಕ್ಕೆ ಮನೋಜ ಹಾನಗಲ್, ಡಾ. ಅಜಿತ ಪ್ರಸಾದ ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ನಾಳೆ ಕುಂದು ಕೊರತೆ ಸಭೆ
ಹುಬ್ಬಳ್ಳಿ:
  ಅವಳಿ ನಗರದ ಬಡಾವಣೆಗಳಾದ ರಾಜಾಜಿ ನಗರ, ವನಸಿರಿ ನಗರ ಹಾಗೂ ತಡಸಿನಕೊಪ್ಪ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಕರ ವಿಷಯದ ಕುರಿತು ಚರ್ಚಿಸಲು ಜು. 27ರಂದು ಮಧ್ಯಾಹ್ನ 3ಕ್ಕೆ ಸತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಭೆ ನಡೆಯಲಿದೆ. ಶಾಸಕ ಅರವಿಂದ ಬೆಲ್ಲದ ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪಾಲ್ಗೊಳ್ಳಲಿದ್ದಾರೆ. ಬಡಾವಣೆಯ ನಾಗರಿಕರು ಸಭೆಗೆ ಆಗಮಿಸಿ ಕುಂದು ಕೊರತೆಗಳನ್ನು ಚರ್ಚಿಸುವುದರ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಯಲ್ಲಪ್ಪ ಅರವಳದ ಮನವಿ ಮಾಡಿದ್ದಾರೆ.

ಅತ್ಯಾಚಾರ ಆರೋಪ: ಸೆರೆ
ಕಲಘಟಗಿ:
  ತಾಲೂಕಿನ ಕುರುವಿನಕೊಪ್ಪ ಗ್ರಾಮದ ಯುವತಿಯೊಬ್ಬಳ ಮೇಲೆ ಯುವಕ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.  ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದ ಪ್ರಕಾಶ ಫಕ್ಕೀರಪ್ಪ ತಳವಾರ (23) ಎಂಬಾತ ಅತ್ಯಾಚಾರ ಮಾಡಿರುವುದಾಗಿ ತಾಲೂಕಿನ ಕುರುವಿನಕೊಪ್ಪದ ಯುವತಿ ನಿನ್ನೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಅಮರೇಶ ಬಾರಕೇರ ತನಿಖೆ ಕೈಗೊಂಡಿದ್ದಾರೆ.
ಹಿನ್ನೆಲೆ: ಕಳೆದ ಒಂದು ವರ್ಷದ ಹಿಂದೆ ಸಂಬಂಧಿಕನೆಂದು ಹೇಳಲಾದ ಆರೋಪಿ ಪ್ರಕಾಶನು ಕುರುವಿನಕೊಪ್ಪ ಗ್ರಾಮಕ್ಕೆ ಶವ ಸಂಸ್ಕಾರಕ್ಕೆ ಬಂದ ಸಮಯದಲ್ಲಿ ಈ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ತದನಂತರ ಯಾವುದೋ ಆಮಿಷ ಒಡ್ಡಿ ಆರು ತಿಂಗಳ ಹಿಂದೆ ಯುವತಿಯನ್ನು ಕರೆದೊಯ್ದು ಹುಬ್ಬಳ್ಳಿಯ ಕೇಶ್ವಾಪುರದ ಶಾಂತಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿ ಅಲ್ಲಿ ಅತ್ಯಾಚಾರವೆಸಗಿದ್ದಾನೆಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.

ಪೈಪ್ ಅಂಗಡಿಯಲ್ಲಿ ಕಳ್ಳತನ
ಹುಬ್ಬಳ್ಳಿ: 
ನಗರದ ನಿಲಿಜನ್ ರಸ್ತೆಯಲ್ಲಿನ ಪೈಪ್ ಅಂಗಡಿಯಲ್ಲಿ ಸುಮಾರು ರು. 15 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾಗಿದೆ. ಉಳಿವೆಪ್ಪ ತೋಟದ ಎಂಬುವರಿಗೆ ಸೇರಿದ ಪವನ ಎಂಟರ್ ಪ್ರೈಸಿಸ್ ಎಂಬ ಅಂಗಡಿಯಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ನಕಲಿ ಕೀಲಿಕೈ ಬಳಸಿ ಅಂಗಡಿಯ ಶಟರ್ಸ್ ತೆರೆದು ಕಳ್ಳರು ಈ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement