ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಾಳುಕೊಂಪೆಯಾದ ತಂಬೂರು ದೇವಸ್ಥಾನ

Mainashree
Updated On : 26 Jul 2013, 11:45 am

ಹುಬ್ಬಳ್ಳಿ: ಒಂದು ಕಾಲದಲ್ಲಿ ಭವ್ಯತೆ ಪ್ರತೀಕವಾಗಿದ್ದ ನಾನು (ತಂಬೂರು ಬಸವಣ್ಣನ ದೇವಸ್ಥಾನ) ಇಂದು ಹಾಳುಕೊಂಪೆ. ನನ್ನ ವೈಭವ ಸಾರಿದ ಕುಸುರಿ ಕೆಲಸದ ಶಿಲಾಮೂರ್ತಿಗಳು ಇಂದು ಭಗ್ನ. ನಾನ್ಯಾರೆಂದು ಗೊತ್ತಾ? ನಾನಿರುವುದು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಲೆನಾಡಿನ ತಂಬೂರು ಎಂಬ ಗ್ರಾಮದಲ್ಲಿ. ನನ್ನ ಹುಟ್ಟು, ವೈಭವದ ಇತಿಹಾಸ ಹೇಳಲು ಹೊರಟರೆ ಅದು ಸುಮಾರು ಹತ್ತನೇ ಶತಮಾನದ ಕಾಲಘಟ್ಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
ನನ್ನ ಸೃಷ್ಟಿಕರ್ತರು ಚಾಲುಕ್ಯ ಮತ್ತು ಗಂಗ ಅರಸರು. ಚಾವುಂಡರಾಯನ ಆಳ್ವಿಕೆ ಸಂದರ್ಭದಲ್ಲಿ ಮಹಾನ್ ಶಿಲ್ಪಿ ಜಕಣಾಚಾರಿ ದ್ರಾವಿಡ ಶೈಲಿಯಲ್ಲಿ ಕೆತ್ತಿ ನನ್ನನ್ನು ನಿರ್ಮಿಸಿದ್ದಾನೆ. ಆ ಸಂದರ್ಭದಲ್ಲಿ ನನ್ನದು ಗತವೈಭವದ ಕಾಲ. ಪ್ರತಿಷ್ಠೆ ತಾಣ. ನನ್ನ ಗರ್ಭದಲ್ಲಿ ಶಿವ ಹಾಗೂ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಅದಕ್ಕೊಂದು ಮೂರ್ತರೂಪ ಕೊಟ್ಟು, ನಾಡಿನ ಜನ ನಿತ್ಯ ನನ್ನನ್ನು ಪೂಜಿಸಲಾರಂಬಿಸಿದರು. ಇನ್ನು ನನಗೆ ಸಂಬಂಧಪಟ್ಟಂತೆ ನನ್ನ ಇತಿಹಾಸವನ್ನು ಸಾರುವ ಶಿಲಾಶಾಸನಗಳು, ಶಿಲ್ಪಕಲೆಗಳು, ಸ್ತಂಭಗಳು, ದೇವಾನುದೇವತೆಗಳ ಉಬ್ಬುಗಲ್ಲುಗಳು ನನ್ನ ಮಡಿಲಲ್ಲಿವೆ. ಇನ್ನು ನಾನಿದ್ದ ಸ್ಥಳವನ್ನು ತಾಮ್ರನಗರಿ ಅಂತ ಕರೆದರು. ಆಡು ಭಾಷೆಯಲ್ಲಿ ಜನರ ಬಾಯಿಂದ ಬಾಯಿಗೆ ಅದು ಇಂದು ತಂಬೂರು ಆಗಿ ಪರಿಣಮಿಸಿದೆ.
ಐಕ್ಯ ಸ್ಥಳ: ನನ್ನ ಇನ್ನೊಂದು ವಿಶೇಷವೆಂದರೆ ಶ್ರೀ ಜ್ಞಾನಜ್ಯೋತಿ ಬಸವಣ್ಣನವರು ಐಕ್ಯವಾದ ನಂತರ ಅವರ ವಚನ ಸಾಹಿತ್ಯದ ರಕ್ಷಣೆಗಾಗಿ ಬಸವಣ್ಣನವರ ಅಳಿಯ ಶ್ರೀ ಚನ್ನಬಸವಣ್ಣನವರು ಕಲ್ಯಾಣದಿಂದ ಪಲಾಯನ ಗೈಯುತ್ತಾರೆ. ಮಾರ್ಗ ಮಧ್ಯ ಈ ತಾಮ್ರನಗರಿ (ತಂಬೂರು) ಗ್ರಾಮದಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡಿದ್ದರು ಅನ್ನುವ ಪ್ರತೀತಿ ಇದೆ. ಇಷ್ಟೆಲ್ಲ ಘಟನಾವಳಿಗಳು ನಡೆದರೂ ಇಂದು ನಾನು ಅನಾಥವಾಗಿದ್ದೇನೆ. ನಿಮ್ಮ ಕಣ್ಣಿಗೆ ನಾನು ಒಂದು ಸಾಧಾರಣ ಕಲ್ಲಿನ ಶಿಲೆಯಾಗಿದ್ದೇನೆ. ಕಾಲಮಾನದ ಜತೆಗೆ ವಾಸ್ತವ ಬದಲಾಗಿದೆ. ಈಗ ನನ್ನ ವಯಸ್ಸು 900 ವರ್ಷ. ಅಂದಿನ ನನ್ನ ವೈಭವ ಇಂದು ಇಲ್ಲ. ದಿನೇ ದಿನೇ ಆ ವೈಭೋಗ ಕ್ಷೀಣಿಸಿದೆ, ಸೊರಗಿದೆ. ದೇವಾಲಯ ಅವಸಾನದ ಅಂಚಿಗೆ ತಲುಪಿದೆ. ದೇವಾಲಯದ ಒಳಗೆ ಕಾಲಿಟ್ಟರೆ ಮೊದಲು ಕಣ್ಣಿಗೆ ಕತ್ತಲೆ ದರ್ಶನವಾಗುತ್ತದೆ. ಗರ್ಭಗುಡಿಯಲ್ಲಿ ಬೇಡದ ಅವಶೇಷಗಳನ್ನು ತುಂಬಿ ನನ್ನನ್ನು ಮಲಿನವಾಗಿಸಿದ್ದಾರೆ. ಶಿಥಿಲಗೊಂಡ ಶಾಸನಗಳು, ದೇವಾಲಯದ ಹೊರಾಂಗಣದಲ್ಲಿ ಬಿದ್ದಿರುವ ಉಬ್ಬುಗಲ್ಲುಗಳು ಮುಕ್ಕಾಗಿ ಮಂಕಾಗಿವೆ. ನನ್ನಂತಹ ಪುರಾತನ ದೇಗುಲಗಳ ರಕ್ಷಣೆಗಾಗಿ ಸರ್ಕಾರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಗಳನ್ನು ಸ್ಥಾಪಿಸಿದೆ. 8 ವರ್ಷಗಳ ಹಿಂದೆ ನನ್ನೂರಿಗೆ ಬಂದು ನನ್ನ ಸುತ್ತಲೂ ಭದ್ರತಾ ಗೋಡೆ ಹಾಗೂ ಸಣ್ಣ-ಪುಟ್ಟ ಲೈಟಿಂಗ್‌ನಂತಹ ವ್ಯವಸ್ಥೆ ಮಾಡಿ ಹೋದವರು ಇನ್ನೂ ಇತ್ತ ಕಡೆ ಸುಳಿದಿಲ್ಲ.
ಗ್ರಾಮಸ್ಥರಿಂದ ಸಮಿತಿ: ಇನ್ನು ನನ್ನ ರಕ್ಷಣೆಗಾಗಿ ಗ್ರಾಮಸ್ಥರೇ ಒಂದು ಸಮಿತಿ ರಚಿಸಿಕೊಂಡು, ನಿತ್ಯ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ವರ್ಷಕ್ಕೊಮ್ಮೆ ಗ್ರಾಮಸ್ಥರೇ ಹಣ ತೊಡಗಿಸಿ ಜಾತ್ರೆಯನ್ನೂ ಮಾಡುತ್ತಾರೆ. ನನ್ನ ಇರುವಿಕೆ ಬಗ್ಗೆ ತಿಳಿಸುವ ಯಾವುದೇ ಮಾಹಿತಿ ಫಲಕ ಇಲ್ಲಿಲ್ಲ. ನನ್ನ ನೋಡಲೆಂದು ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯವಿಲ್ಲ. ಸುಗಮವಾದ ರಸ್ತೆ ಮಾರ್ಗವಿಲ್ಲ. ಪ್ರವಾಸಿ ತಾಣವಾಗಬಲ್ಲ ಎಲ್ಲ ಅನುಕೂಲತೆಗಳು ನನ್ನಲ್ಲಿದ್ದರೂ ಅದರ ವಿರುದ್ಧ ಧ್ವನಿ ಎತ್ತುವವರಿಲ್ಲ. ಏನೇ ಹೇಳಿ, ಐತಿಹಾಸಿಕ ಹಿನ್ನೆಲೆಯಿಂದ ಕಲಘಟಗಿ ತಾಲೂಕಿಗೆ, ಧಾರವಾಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಬೇಕಿದ್ದ ನನ್ನನ್ನು ನೀವೆಲ್ಲ ನಿರ್ಲಕ್ಷಿಸಿದ್ದು ನಿಜಕ್ಕೂ ದುರದೃಷ್ಟವೇ ಸರಿ.
ಇಂಥ ಐತಿಹಾಸಿಕ ಸ್ಮಾರಕವುಳ್ಳ ಗ್ರಾಮದಲ್ಲಿ ನಾವಿರುವುದು ನಮ್ಮ ಸೌಭಾಗ್ಯ. 8 ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಪ್ರಾಚ್ಯ ಇಲಾಖೆಯವರು ಬಂದು ಭೇಟಿ ನೀಡಿ ಅಲ್ಪ-ಸ್ವಲ್ಪ ಕಾಮಗಾರಿಗಳನ್ನು ಮಾಡಿದ್ದು ಬಿಟ್ಟರೆ ಮತ್ಯಾವ ಅಧಿಕಾರಿಗಳೂ ಇತ್ತ ಸುಳಿದಿಲ್ಲ. ಸರ್ಕಾರದಿಂದ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಯಾವುದೇ ನೆರವಿನ ಹಣಕಾಸು ಬಂದಿಲ್ಲ. ಹೊಸ ಸರ್ಕಾರದಿಂದ ಯಾವುದಾದರೂ ಹಣಕಾಸು ಹರಿವು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.
- ನಿರ್ಮಲಾ ಉಡುಪಿ  
ಗ್ರಾಪಂ ಅಧ್ಯಕ್ಷರು, ತಂಬೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement