ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಲ್ಲಾರೂ ಅದಾರ್ರಿ ಆದ್ರೂ ನನ್ನ ರಸ್ತೆಗೆ ಒಗದಾರ್ರಿ..

Mainashree
Updated On : 28 Jul 2013, 1:13 am

ಕನ್ನಡಪ್ರಭ ವಾರ್ತೆ, ಹೆಬ್ಬಳ್ಳಿ, ಜು. 27
ಅವ್ವ, ಅಣ್ಣ, ಅಕ್ಕ, ತಂಗಿ ಎಲ್ಲಾರೂ ಅದಾರ್ರಿ ಆದ್ರೂ ನನ್ನ ರಸ್ತೆಗೆ ಒಗದಾರ್ರಿ.. ಎಂಬ ಕರಳು ಹಿಂಡುವ ರೋದನ ಅಲ್ಲಿತ್ತು. ಹೆತ್ತವ್ವನೇ ನನ್ನ ಸಂಕಟ ಒಮ್ಮೆ ಕೇಳು ಎಂಬ ಮನ ಕಲುಕುವ ದೃಶ್ಯ ಸೃಷ್ಟಿಯಾಗಿತ್ತು.
ತಾಲೂಕಿನ ಹೆಬ್ಬಳ್ಳಿಯಲ್ಲಿ ಇಂಥ ಹೃದಯಸ್ಪರ್ಶಿ ಘಟನೆ ಸದ್ಯ ಬೆಳಕಿಗೆ ಬಂದಿದೆ. ಅಂಗವಿಕಲೆಯಾಗಿ ಹುಟ್ಟಿದ ತಪ್ಪಿಗೆ ಭಿಕ್ಷೆ ಬೇಡಿ ರಸ್ತೆಗುಂಡಿಗಳಲ್ಲಿ ಬದುಕುತ್ತಿರುವ ಹೆಬ್ಬಳ್ಳಿ ಗ್ರಾಮದ ಮಂಗಲಾ ಶಿರುಗುಪ್ಪಿ(17) ಎಂಬ ಬಾಲಕಿ ವ್ಯಥೆಯ ಕಥೆ ಇದು. ಮಂಗಳಾ ಹುಟ್ಟುವ ಮುನ್ನವೇ ತಂದೆ ಕಳೆದುಕೊಂಡಿದ್ದಳು. ಅಲ್ಲದೇ, ಅವಳಿಗೆ ಬಾಲ್ಯದಲ್ಲಿಯೇ ಪಾರ್ಶ್ವವಾಯು ಹೊಡೆದ ಪರಿಣಾಮ ಎಡಗೈ ಸ್ವಾಧೀನ ತಪ್ಪಿತ್ತು. ಇದೇ ಒಂದು ಕಾರಣಕ್ಕಾಗಿ ಬಾಲಕಿಗೆ ಮಂಗಲಾ ಬೀದಿಗೆ ಬಿದ್ದು ಇಂಥ ಸ್ಥಿತಿ ಅನುಭವಿಸುತ್ತಿದ್ದಾಳೆ.
ತಂದೆ ತೀರಿದ ನಂತರ ಮಂಗಲಾಳ ತಾಯಿ ವಿಮಲಮ್ಮ ಹೆಬ್ಬಳ್ಳಿಯಲ್ಲಿನ ಸ್ವಂತ ಮನೆಯನ್ನು ಮಾರಿ ಇಚಲಕರಂಜಿಗೆ ತನ್ನ ಆರು ಜನ ಹೆಣ್ಣು ಮಕ್ಕಳು ಹಾಗೂ ಪುತ್ರನನ್ನು ಕರೆದುಕೊಂಡು ಬಟ್ಟೆ ನೇಯುವ ಕೆಲಸಕ್ಕೆ ವಲಸೆ ಹೋಗಿದ್ದರು. ಕಾಲಾಂತರದಲ್ಲಿ ವಿಮಲಮ್ಮನು ವಿಧಿವಶರಾಗಿದ್ದಾರೆ. ತಾಯಿ ತೀರಿದ ನಂತರವೇ ಬಾಲಕಿ ಮಂಗಲಾ ಪಾಲಿನ ಕರಾಳ ದಿನಗಳು ಶುರುವಾದವು. ಬದುಕಿನಲ್ಲಿ ಕರುಳ ಬಳ್ಳಿ ಹಂಚಿಕೊಂಡು ಹುಟ್ಟಿದ ಸಹೋದರಿಯರು ಹಾಗೂ ಅಣ್ಣನಿಗೆ ತಮ್ಮ ಸ್ವಂತ ತಂಗಿಯೇ ಕ್ರಮೇಣ ಭಾರವಾಗ ತೊಡಗಿದಳು. ಬಾಲಕಿ ಅಣ್ಣ ಮಡಿವಾಳಿ ಮನೆಯ ಜವಾಬ್ದಾರಿ ಹೊತ್ತು ತನ್ನ ಇನ್ನುಳಿದ ಐದು ಜನ ಸಹೋದರಿಯರ ವಿವಾಹ ಮಾಡಿಕೊಟ್ಟಿದ್ದಾನೆ. ಆದರೆ, ಆತನ ಎರಡನೇ ಅಕ್ಕ ಬಸಮ್ಮನನ್ನು ಹುಬ್ಬಳ್ಳಿಯ ಎಸ್.ಎಂ. ಕೃಷ್ಣ ನಗರದ ನಿವಾಸಿಯೊಬ್ಬರಿಗೆ ವಿವಾಹ ಮಾಡಿಕೊಟ್ಟಿದ್ದ. ಹಾಗಾಗಿ, ಮಂಗಲಾಳನ್ನು ಆಕೆಯ ಮನೆಯಲ್ಲಿಯೇ ಬಿಟ್ಟು ಕೈತೊಳೆದುಕೊಂಡ ಸ್ವಂತ ಅಣ್ಣ.
ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದರು: ಒಡಹುಟ್ಟಿದ ಅಕ್ಕ ತನ್ನ ತಂಗಿ ಎಂಬುದನ್ನೂ ಮರೆತು ಮಂಗಲಾಗೆ ಪಾರ್ಶ್ವವಾಯು ಇದೆ ಎಂಬ ಕಾರಣ ಮುಂದಿಟ್ಟುಕೊಂಡು ತನ್ನ ಮನೆಯ ಎದುರಿನ ಬೇವಿನ ಮರದ ಕೆಳಗೆ ವಾಸಿಸಲು ಅವಕಾಶ ಕಲ್ಪಿಸಿದ್ದಳು. ಎಂಥ ಮಳೆ, ಗಾಳಿ, ಚಳಿಯಲ್ಲೂ ಮಂಗಲಾ ಆ ಬೇವಿನಮರದ ಕೆಳಗಡೆಯೇ ವಾಸಿಸಬೇಕಾದ ಸ್ಥಿತಿ ಇತ್ತು. ಅಷ್ಟಾದರೂ ಅಕ್ಕ ಬಸಮ್ಮನ ಪತಿ ಮಂಗಲಾಗೆ ಚಿತ್ರಹಿಂಸೆ ಕೊಟ್ಟು ಮನೆ ಬಿಡುವಂತೆ ಕಿರುಕುಳ ನೀಡಿದ್ದಾನೆ. ಇದೂ ಸಾಲದೆಂಬಂತೆ ಅಕ್ಕನ ಮಕ್ಕಳೂ ಮಂಗಲಾಗೆ ಚಿತ್ರಹಿಂಸೆ ಕೊಡುತ್ತಿದ್ದರು. ಆದರೂ ಸಹಿಸಿಕೊಂಡು ಅಲ್ಲಿಯೇ ತಂಗಿದ್ದರೂ ಕಳೆದ ನಾಲ್ಕು ದಿನಗಳ ಹಿಂದೆ ಬಾಲಕಿಯ ಮಂಗಲಾಳನ್ನು ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಗೆ ಮಂಗಲಾ: ಸುಮಾರು ಹತ್ತು ವರ್ಷಗಳಿಂದ ಒಂದೆಡೆ ಕುಳಿತ ಪರಿಣಾಮದಿಂದ ಪ್ರಸ್ತುತ ಮಂಗಲಾ ನಡೆದಾಡುವ ಶಕ್ತಿ ಕಳೆದುಕೊಂಡಿದ್ದಾಳೆ. ಹಾಗಾಗಿ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಅವರಿವರ ಹತ್ತಿರ ಭಿಕ್ಷೆ ಬೇಡಿ ಹಣ ಸಂಗ್ರಹಿಸಿಕೊಂಡು ಸ್ವಗ್ರಾಮಕ್ಕೆ ಬಂದಿದ್ದಾಳೆ. ಗ್ರಾಮದ ಮುಖಂಡರ ಎದುರು ತನ್ನ ವಾಸ್ತವ ಸ್ಥಿತಿಯ ಚಿತ್ರಣವನ್ನು ಬಿಚ್ಚಿಟ್ಟಿದ್ದಾಳೆ.
    ಶನಿವಾರ ಕಿಡ್ಸ್ ಸಂಸ್ಥೆಯವರಿಗೆ ಗ್ರಾಮಸ್ಥರು ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಿಡ್ಸ್ ಸಂಸ್ಥೆಯ ಕಾರ್ಯಕರ್ತೆ ಗಿರಿಜಾ ಅವರು ಊರಿನ ಜನರ ಸಹಕಾರದೊಂದಿಗೆ ಹುಬ್ಬಳ್ಳಿಯ ಮಕ್ಕಳ ಕಲ್ಯಾಣ ಸಮಿತಿಗೆ ಮಂಗಲಾಳನ್ನು ಸೇರಿಸಿದ್ದಾರೆ. ಈ ಸಮಿತಿಯೂ ಮಂಗಲಾಗೆ ಇರುವ ಭಾಗ್ಯ ಕೊಡಲಿಲ್ಲ. ನವನಗರದ ಸ್ನೇಹಾ ಎಂಬ ಖಾಸಗಿ ಸಂಸೆ ಮಂಗಲಾಗೆ ಆಶ್ರಯ ನೀಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement