ಪರಿಸರ ಸ್ನೇಹಿ ಗಣಪ ಪೂಜಿಸಿ: ಸಾಲಿಮಠ
ಹುಬ್ಬಳ್ಳಿ: ಒಂದು ಕಾಲದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತಿದ್ದ ಗಣೇಶ ಚತುರ್ಥಿಯಲ್ಲೀಗ ಆಡಂಬರವೇ ಪ್ರಮುಖ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳು, ಪಟಾಕಿಯಂತ ಸಿಡಿಮದ್ದಿನಿಂದಾಗಿ ಪರಿಸರ ಹಾನಿಯಾಗುತ್ತಿದೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಗಣೇಶ ಚತುರ್ಥಿ ಆಚರಿಸಬೇಕೆಂದು ಕೋರಿ 'ಮಕ್ಕಳಲ್ಲಿ ಪೌರ ಪ್ರಜ್ಞೆ ಜಾಗ್ರತಾ ಸಮಿತಿ' ನಗರದಲ್ಲಿ ಈಚೆಗೆ ಶಾಲಾ ಮಕ್ಕಳ ಸಹಿತವಾಗಿ ಮೆರವಣಿಗೆ ನಡೆಸಿ ಸಹಿ ಸಂಗ್ರಹಿಸಿತು.
300ಕ್ಕೂ ಹೆಚ್ಚು ಮಕ್ಕಳು ಜಾಗೃತಿ ಮೆರವಣಿಗೆಯಲ್ಲಿ ಪಾಲ್ಗೊಂಡು, ತಾವು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶಮೂರ್ತಿಯನ್ನು ಪೂಜಿಸುವುದಿಲ್ಲ ಹಾಗೂ ಚೌತಿಯಂದು ಪಟಾಕಿ ಹಾರಿಸುವುದಿಲ್ಲ ಎಂದು ಪ್ರತಿಜ್ಞೆ ಗೈದರು. ವಿದ್ಯಾರ್ಥಿಗಳು ಬಿವಿಬಿ ಕಾಲೇಜು ಎದುರು ಮಾನವ ಸರಪಳಿ ರಚಿಸಿದರು.
ಸಮಿತಿಯ ಸಂಚಾಲಕಿ ಗೀತಾ ಸಾಲಿಮಠ ಮಾತನಾಡಿ, ನಗರ ಪ್ರದೇಶದಲ್ಲಿ ಆಚರಿಸಲಾಗುತ್ತಿರುವ ಗಣೇಶ ಹಬ್ಬ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಮೂರ್ತಿಗಳು ಮಣ್ಣಿನಲ್ಲಿ ಕರಗುವುದಿಲ್ಲ, ಇದೇ ವೇಳೆ ಬಣ್ಣದಲ್ಲಿನ ಹಾನಿಕಾರಕ ಪದಾರ್ಥ ನೀರಿನಲ್ಲಿ ಮಿಶ್ರಣವಾಗಿ ಹಾನಿಯಾಗುತ್ತದೆ ಎಂದರು.
ಅಲ್ತಾಫ್ ಕಿತ್ತೂರ ಇತರರಿದ್ದರು.